ಮೈಸೂರು: PGRSS ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ಹೂಟಗಳ್ಳಿ ಟೈಲರಿಂಗ್ ಮಾಲೀಕರ ಸಂಘದ ಮೈಸೂರು ವತಿಯಿಂದ ಹೂಟಗಳ್ಳಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ, ವಲಸೆ ಟೈಲರ್‌ಗಳಿಗೆ ಹೊಸ ಲೈಸೆನ್ಸ್ ನೀಡದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಮನವಿಯಲ್ಲಿ, ಹಲವು ವರ್ಷಗಳಿಂದ ಸ್ಥಳೀಯವಾಗಿ ಟೈಲರಿಂಗ್ ಅಂಗಡಿಗಳನ್ನು ನಡೆಸುತ್ತಿರುವ ಮಾಲೀಕರು ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದು, ಬಳಿಕ ಅವರು ಗ್ರಾಹಕರ ಸಂಪರ್ಕವನ್ನು ಬಳಸಿಕೊಂಡು ಸ್ವಂತ ಅಂಗಡಿಗಳನ್ನು ಆರಂಭಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕೆಲವರು ಬಾಡಿಗೆ ಮನೆಗಳಲ್ಲಿಯೂ ಟೈಲರಿಂಗ್ ಕೆಲಸ ನಡೆಸುತ್ತಿರುವುದರಿಂದ ಸ್ಥಳೀಯ ಟೈಲರ್‌ಗಳ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ನೀಡಿರುವ ಲೈಸೆನ್ಸ್‌ಗಳ ಪರಿಶೀಲನೆ ನಡೆಸಬೇಕು, ನಿಯಮ ಉಲ್ಲಂಘಿಸಿ ಮನೆಗಳಲ್ಲಿ ವಾಣಿಜ್ಯ ಟೈಲರಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಹೊಸ ಲೈಸೆನ್ಸ್ ನೀಡದಂತೆ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ PGRSS ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷ ಯಾದವ್ ಹರೀಶ್, ಚಿರಜೀವ ಸೇವಾ ಟ್ರಸ್ಟ್ ಅಧ್ಯಕ್ಷ ರಕ್ತದಾನಿ ಮಂಜು, ಟೈಲರಿಂಗ್ ಮಾಲೀಕರಾದ ಮಂಜುಳಾ (ಬೆಳವಾಡಿ), ಮಣಿ ಎಸ್., ಸ್ವಾಮಿ ಟೈಲರ್, ಮಣಿ, ಆಶಾರಾಣಿ, ಶಿಲ್ಪಾ, ಪಲ್ಲವಿ, ಸುನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.


