ಬಂಟ್ವಾಳ: ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅಸ್ತಂಗತರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿಯವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ (ಫರೆಂಗಿಪೇಟೆ) ವಹಿಸಿದ್ದರು.
ಮುಖ್ಯ ಭಾಷಣ ಮಾಡಿದ ಸಂಸ್ಕಾರ ಭಾರತೀ ಪಾರಂಪರಿಕ ಕಲಾ ಸಂಯೋಜಕಿ ಡಾ. ವಾರಿಜಾ ಮಂಚಿ ಅವರು, “ನಮ್ಮ ಸಮಕಾಲೀನರಾಗಿ ಜಾನಕಮ್ಮ ಇದ್ದರೆಂಬುದೇ ನಮ್ಮ ಸೌಭಾಗ್ಯ. ಮಗುವಿನ ಸ್ವರಕ್ಕೆ ಮಗುವಾಗಿ, ವೃದ್ಧಾಪ್ಯದ ನಡುಗುವ ಧ್ವನಿಗೂ ಜೀವ ತುಂಬಿದ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವುದು ಅಪರೂಪದ ಸಾಧನೆ. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರೂ ಅತ್ಯಂತ ಸರಳ ಜೀವನ ನಡೆಸಿದ ಜಾನಕಮ್ಮನ ಕಂಠಸಿರಿಯಲ್ಲಿ ಬಾಡಿದ ಹೂವೂ ಅರಳಿತು. ಅವರ ಜೀವನ ಹಾಗೂ ನಡೆ-ನುಡಿ ಎಲ್ಲರಿಗೂ ಆದರ್ಶ” ಎಂದು ನುಡಿದರು.

ಸಂಸ್ಕಾರ ಭಾರತೀ ಜಿಲ್ಲಾ ಪ್ರದರ್ಶಕ ಕಲಾ ಸಂಯೋಜಕ ಬಿ. ದೀಪಕ್ ಕುಮಾರ್ ಮಾತನಾಡಿ, “ಜಾನಕಮ್ಮನ ಹಾಡುಗಳೊಂದಿಗೆ ನಾವು ಬೆಳೆದವರು. ಎಲ್ಲ ರೀತಿಯ ಭಾವನೆಗಳಿಗೆ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ ಅವರು ಹಾಡುವಾಗ ಯಾವುದೇ ಆಂಗಿಕ ಚಲನೆಗಳಿಲ್ಲದೆ ಕೇವಲ ಕಂಠಸಿರಿಯ ಮೂಲಕವೇ ಕೇಳುಗರನ್ನು ಭಾವಲೋಕಕ್ಕೆ ಕೊಂಡೊಯ್ಯುತ್ತಿದ್ದರು. ಅವರು ಅಸ್ತಂಗತರಾಗಿಲ್ಲ, ತಮ್ಮ ಅಮರ ಗೀತೆಗಳ ಮೂಲಕ ಎಲ್ಲರ ಹೃದಯದಲ್ಲಿ ನಂದಾದೀಪವಾಗಿ ಉಳಿದಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ದಕ್ಷಿಣ ಪ್ರಾಂತದ ಉಪಾಧ್ಯಕ್ಷೆ ರೂಪಲೇಖ ಹರಿಕೃಷ್ಣ, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಸಹ ಕೋಶಪ್ರಮುಖ್ ರಘುವೀರ್ ಗಟ್ಟಿ, ಜಿಲ್ಲಾ ಕಾರ್ಯದರ್ಶಿ ವಿನುತಾ ಕೆ. ಸಾಲೆತ್ತೂರು, ಕೋಶ ಪ್ರಮುಖ್ ವಿಜಯಾ ಬಿ. ಶೆಟ್ಟಿ ಸಾಲೆತ್ತೂರು, ಉಪಾಧ್ಯಕ್ಷರಾದ ಅನಿಲ್ ಪಂಡಿತ್ ಹಾಗೂ ಸಂಪತ್ ಸುವರ್ಣ, ಸಹ ಕಾರ್ಯದರ್ಶಿಗಳಾದ ಬಿ. ಶಶಿಕುಮಾರ್ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಯಕಾರಿ ಸದಸ್ಯರಾದ ಪುರುಷೋತ್ತಮ ಎನ್., ಗಿರೀಶ್ ವೇಣೂರು ಸೇರಿದಂತೆ ಸಂಸ್ಕಾರ ಮಿತ್ರರು ಉಪಸ್ಥಿತರಿದ್ದರು. ವಿನುತಾ ಕೆ. ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.



