Breaking
13 Jul 2026, Mon

₹26.18 ಕೋಟಿ ವೆಚ್ಚದಲ್ಲಿ ಬಂಟ್ವಾಳ ರೈಲು ನಿಲ್ದಾಣಕ್ಕೆ ಹೊಸ ಕಾಯಕಲ್ಪ: ‘ಅಮೃತ ಭಾರತ್ ಸ್ಟೇಷನ್’ ಯೋಜನೆಯಡಿ ಹೈಟೆಕ್ ರೂಪ

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಬಂಟ್ವಾಳ ರೈಲು ನಿಲ್ದಾಣವು ‘ಅಮೃತ ಭಾರತ್ ಸ್ಟೇಷನ್’ ಯೋಜನೆಯಡಿ ಸಂಪೂರ್ಣವಾಗಿ ನವೀಕರಣಗೊಂಡು ಆಧುನಿಕ ಸೌಲಭ್ಯಗಳೊಂದಿಗೆ ಉದ್ಘಾಟನೆಗೆ ಸಿದ್ಧವಾಗಿದೆ. ಸುಮಾರು ₹26.18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಈ ರೈಲು ನಿಲ್ದಾಣವು ಕಳೆದ ಹಲವು ವರ್ಷಗಳಿಂದ ಸ್ಥಳೀಯರು ವ್ಯಕ್ತಪಡಿಸಿದ್ದ ಬೇಡಿಕೆಗೆ ಸಾಕಾರ ರೂಪ ನೀಡಿದೆ.

ರಾಜ್ಯದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ‘ಅಮೃತ ಭಾರತ್ ಸ್ಟೇಷನ್’ ಯೋಜನೆಯಡಿ ಅಭಿವೃದ್ಧಿಗೊಂಡ ಏಕೈಕ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಬಂಟ್ವಾಳ ಪಾತ್ರವಾಗಿದೆ. ದೇಶಾದ್ಯಂತ 1,300 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಈ ಕಾಮಗಾರಿ ಪೂರ್ಣಗೊಂಡಿದೆ.

ರೈಲು ನಿಲ್ದಾಣದಲ್ಲಿ ಆಕರ್ಷಕ ಪ್ರವೇಶ ಹಾಗೂ ನಿರ್ಗಮನ ದ್ವಾರ, ವಿಶಾಲ ಪ್ಲಾಟ್‌ಫಾರ್ಮ್, ರೂಫ್ ಪ್ಲಾಜಾ, ಅತ್ಯಾಧುನಿಕ ವಿಶ್ರಾಂತಿ ಕೊಠಡಿಗಳು, ಅಂಗವಿಕಲ ಸ್ನೇಹಿ ಶೌಚಾಲಯ, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ, ರೈಲ್ವೆ ಭದ್ರತಾ ಪಡೆ ಹಾಗೂ ರಾಜ್ಯ ಪೊಲೀಸರಿಗೆ ಪ್ರತ್ಯೇಕ ಕೊಠಡಿಗಳು ನಿರ್ಮಾಣಗೊಂಡಿವೆ. ಮೇಲ್ಸೇತುವೆಗೆ ಎರಡೂ ಬದಿಗಳಲ್ಲಿ ಲಿಫ್ಟ್ ಅಳವಡಿಸುವ ಕಾಮಗಾರಿ ಅಂತಿಮ ಹಂತದಲ್ಲಿದೆ.

ಇದರ ಜೊತೆಗೆ ಕುಡಿಯುವ ನೀರು, ಉದ್ಯಾನವನ, ಉಪಹಾರಗೃಹ, ವಿಶಾಲ ವಾಹನ ನಿಲುಗಡೆ ವ್ಯವಸ್ಥೆ, ದ್ವಿಚಕ್ರ ಮತ್ತು ಕಾರುಗಳಿಗೆ ಪ್ರತ್ಯೇಕ ಮಾರ್ಗ, ಡಿಜಿಟಲ್ ಮಾಹಿತಿ ಫಲಕ ಹಾಗೂ ಉಚಿತ ವೈ-ಫೈ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲು ನಿಲ್ದಾಣದ ಗೋಡೆಗಳ ಮೇಲೆ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ಪ್ರತಿದಿನ 15ಕ್ಕೂ ಹೆಚ್ಚು ರೈಲುಗಳು ಬಂಟ್ವಾಳ ರೈಲು ನಿಲ್ದಾಣದಲ್ಲಿ ಸಂಚರಿಸುತ್ತಿದ್ದು, ಹೊಸ ರೂಪದ ನಿಲ್ದಾಣವು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಹಿಂದೆ ಸಂಜೆ ವೇಳೆಯಲ್ಲಿ ಕಿಡಿಗೇಡಿಗಳು ಮತ್ತು ಗಾಂಜಾ ವ್ಯಸನಿಗಳ ತಿರುಗಾಟ ಹೆಚ್ಚಾಗಿದ್ದ ಪ್ರದೇಶ ಇದೀಗ ಸುರಕ್ಷಿತ ವಾತಾವರಣವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಆದರೆ, ಎಲ್ಲ ಸೌಲಭ್ಯಗಳು ಅತ್ಯಾಧುನಿಕವಾಗಿದ್ದರೂ ಶೌಚಾಲಯಗಳ ಶುಚಿತ್ವಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿದೆ ಎಂಬ ಅಭಿಪ್ರಾಯವನ್ನು ಕೆಲವು ನಾಗರಿಕರು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *