ಬೆಂಗಳೂರು: ಇತ್ತೀಚೆಗೆ ನಡೆದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು, ಮೃತನ ಮಗ ಹಾಗೂ ಅಳಿಯನನ್ನು ಬಂಧಿಸಿದ್ದಾರೆ.

ಮೃತರನ್ನು ಬೈಕ್ ಮೆಕಾನಿಕ್ ರಫೀಕ್ (48) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಅಳಿಯ ಶಹಿನ್ ಷಾ (36) ಮತ್ತು ಮಗ ಸೈಯದ್ ಶಾರೂಕ್ (21) ಬಂಧಿತರಾಗಿದ್ದಾರೆ.

ಪೊಲೀಸರ ಪ್ರಕಾರ, ರಫೀಕ್ ಮದ್ಯಪಾನದ ಚಟದಿಂದಾಗಿ ಪ್ರತಿದಿನ ಕುಟುಂಬದವರೊಂದಿಗೆ ಗಲಾಟೆ ನಡೆಸುತ್ತಿದ್ದು, ಈ ಕಾರಣಕ್ಕೆ ಅವರನ್ನು ರಿಹ್ಯಾಬಿಲಿಟೇಶನ್ ಕೇಂದ್ರಕ್ಕೂ ದಾಖಲಿಸಲಾಗಿತ್ತು. ಅಲ್ಲಿಂದ ಮರಳಿದ ಬಳಿಕವೂ ಮತ್ತೆ ಮದ್ಯಪಾನ ಆರಂಭಿಸಿದ್ದರಿಂದ ಕುಟುಂಬಸ್ಥರು ಬೇಸತ್ತಿದ್ದರು.

ಜುಲೈ 4ರಂದು ಆರೋಪಿಗಳು ರಫೀಕ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಕುಡಿಸಿ, ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಸಂದ್ರ ಕೆರೆ ಸಮೀಪದ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


