ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 21 ವರ್ಷದ ನವವಿವಾಹಿತೆಯೊಬ್ಬರು ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶ್ವೇತಾ (21) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತೆಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪತಿ, ಅವರ ಸಹೋದರಿ ಹಾಗೂ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಕಳೆದ ವರ್ಷ ಮಂತ್ರಾಲಯಕ್ಕೆ ರೈಲು ಪ್ರಯಾಣದ ವೇಳೆ ಶ್ವೇತಾ ಮತ್ತು ಮೂರ್ತಿ ಪರಿಚಯವಾಗಿದ್ದು, ಬಳಿಕ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು. ಮೂರ್ತಿ ಖಾಸಗಿ ವಿಮಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಶ್ವೇತಾ ಎರಡು ತಿಂಗಳ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದ್ದರು. ದಂಪತಿ ಹೆಗ್ಗನಹಳ್ಳಿ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ, ಪತಿಯ ಸಹೋದರಿಗಾಗಿ ವರದಕ್ಷಿಣೆ ಹಣ ತರಬೇಕೆಂದು ಒತ್ತಡ ಹೇರಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜುಲೈ 12ರಂದು ಕೂಡ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಶ್ವೇತಾ ಮನೆಗೆ ಹಿಂದಿರುಗಿದಾಗ ಮನೆ ಬೀಗ ಹಾಕಲಾಗಿತ್ತು. ಮನೆ ಮಾಲೀಕರಿಂದ ಮತ್ತೊಂದು ಕೀ ಪಡೆದು ಒಳಗೆ ಹೋಗಿದ್ದ ಅವರು ಡೆತ್ನೋಟ್ ಬರೆದು ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಡರಾತ್ರಿ ಮನೆಗೆ ಬಂದ ಪತಿ ಮೂರ್ತಿ, ಹಲವು ಬಾರಿ ಕರೆಗಂಟೆ ಒತ್ತಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ತನ್ನಲ್ಲಿದ್ದ ಕೀ ಬಳಸಿ ಬಾಗಿಲು ತೆರೆದಾಗ, ಶ್ವೇತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಮನೆ ಮಾಲೀಕರು ಹಾಗೂ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಕಾಮಾಕ್ಷಿಪಾಳ್ಯ ಪೊಲೀಸರು ಡೆತ್ನೋಟ್ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡೆತ್ನೋಟ್ನಲ್ಲಿ, “ನನ್ನ ಸಾವಿಗೆ ನನ್ನ ಗಂಡ ಮತ್ತು ಅವರ ಅಕ್ಕನೇ ಕಾರಣ. ಅವರಿಂದ ನನಗೆ ಹಿಂಸೆ ಆಗುತ್ತಿದೆ. ಬದುಕುವ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸತ್ತರೆ ಅವರನ್ನು ಸುಮ್ಮನೆ ಬಿಡಬೇಡ ಅಮ್ಮ. ನನ್ನಿಂದ ತಪ್ಪಾಯ್ತು, ಕ್ಷಮಿಸಿಬಿಡು” ಎಂದು ಶ್ವೇತಾ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


