ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 9ರಂದು ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಹಿರಿಯರ ಚಿಂತನಾ ಸಮಾವೇಶ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.

ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮ ಮೇರಮಜಲು ಸಂಚಾಲಕ ಹರೀಶ್ ಪೆರ್ಗಡೆ ಅವರನ್ನು ಸಮಾವೇಶದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ನಾಯಕ್ ಕರ್ಪೆ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತ ಸಂಜೀವ ನಾಯಕ್ ಕಲ್ಲೆಗ ಅವರಿಗೂ ಸನ್ಮಾನ ನಡೆಯಲಿದೆ ಎಂದರು.

ಸಭೆಯನ್ನು ನಿವೃತ್ತ ಶಿಕ್ಷಕ ಶಂಕರ ನಾರಾಯಣ ಹೊಳ್ಳ ಉದ್ಘಾಟಿಸಿ, ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಶುಭ ಹಾರೈಸಿದರು.

ಸಮಾವೇಶದ ಅಂಗವಾಗಿ ಬೆಳಿಗ್ಗೆ 7.30ರಿಂದ ಗಣಹೋಮ ಹಾಗೂ ರುದ್ರಪಠಣ ನಡೆಯಲಿದೆ. ಪ್ರಸಿದ್ಧ ಗಮಕಿ ಮಂಜುಳಾ ಸುಬ್ರಮಣ್ಯ ಭಟ್ ಮಂಚಿ ಗಮಕ ವಾಚನ ನಡೆಸಲಿದ್ದು, ಈಶ್ವರ ಭಟ್ ಗುಂಡ್ಯಡ್ಕ ಅವರು ವ್ಯಾಖ್ಯಾನ ನೀಡಲಿದ್ದಾರೆ. ಶ್ರೀ ರಾಮಕೃಷ್ಣ ತಪೋವನ, ಪೊಳಲಿಯ ಪರಮಪೂಜ್ಯ ಸ್ವಾಮಿ ಚೈತನ್ಯಾನಂದಜಿ ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಚಿಂತನಾ-ಮಂಥನ ಗೋಷ್ಠಿ ನಡೆಯಲಿದೆ.

ಸಭೆಯಲ್ಲಿ ಪ್ರತಿಷ್ಠಾನದ ಪ್ರಮುಖ ಪದಾಧಿಕಾರಿಗಳಾದ ಭಾಸ್ಕರ ಬಾರ್ಯ ಪುತ್ತೂರು, ಅನಾರು ಕೃಷ್ಣ ಶರ್ಮ ಬಿ.ಸಿ.ರೋಡು, ಪ್ರೊ. ವೇದವ್ಯಾಸ ರಾಮಕುಂಜ, ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಡಾ. ಬಿ.ಎನ್. ಮಹಾಲಿಂಗ ಭಟ್ ಬಿಲ್ಲಂಪದವು, ಜಯರಾಮ ಪೂಜಾರಿ ನರಿಕೊಂಬು, ರಾಜಮಣಿ ರಾಮಕುಂಜ ಹಾಗೂ ಭಾರತಿ ಬಂಟ್ವಾಳ ಉಪಸ್ಥಿತರಿದ್ದರು.

ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ಪದಾಧಿಕಾರಿಗಳಾದ ಜಯಾನಂದ ಪೆರಾಜೆ, ಪ್ರೊ. ಸುಬ್ರಾಯ ಮಡಿವಾಳ, ಭವಾನಿ ಶಂಕರ ಶೆಟ್ಟಿ, ಸೀತಾರಾಮ ಶೆಟ್ಟಿ ಉಜಿರೆ, ಸುಮಿತ್ರಾ ಎಸ್. ಮಡಿವಾಳ, ಪ್ರೇಮಲತಾ ರಾವ್, ಚಂದ್ರಶೇಖರ ಆಳ್ವ ಪಡುಮಲೆ ಸೇರಿದಂತೆ ಹಲವರು ಸಲಹೆ-ಸೂಚನೆಗಳನ್ನು ನೀಡಿದರು. ಸಮಾವೇಶದ ಯಶಸ್ವಿ ಆಯೋಜನೆಗಾಗಿ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.


