Breaking
3 Sep 2026, Thu

ಮಳೆ ಕೊರತೆ ಹಿನ್ನಲೆ ರೈತರ ಕೃಷಿ ಸಾಲ ಮನ್ನಾ ಮಾಡಲು ಪ್ರಭಾಕರ ಪ್ರಭು ಒತ್ತಾಯ

2026-27 ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಬಹುತೇಕ ಕಡಿಮೆಯಾಗಿದ್ದು ಭತ್ತ ಬೇಸಾಯಗಾರರು ಬೇಸಾಯಕ್ಕೆ ನೀರಿಲ್ಲದೆ ಆಕಾಶದತ್ತ ಮುಖ ಮಾಡಿದ್ದಾರೆ. ತೀವ್ರ ಕೈಕೊಟ್ಟ ಮಳೆಯ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದ ವಿವಿಧ ಕಡೆಗಳಲ್ಲಿ ಗಂಭೀರ ಸಮಸ್ಯೆ ಉದ್ಭವಿಸಿದೆ.

ಮಳೆಯಾಶ್ರಿತ ಬೆಟ್ಟು ಗದ್ದೆಗಳಲ್ಲಿ ಇನ್ನೂ ಸಹ ಬಿತ್ತನೆ ಕಾರ್ಯ ಪ್ರಾರಂಭವೇ ಆಗಿಲ್ಲ, ಬೆರಳೆಣಿಕೆಯ ರೈತರು ತಮ್ಮ ಕೊಳವೆಬಾವಿ ಅಥವಾ ಕೆರೆಗಳಿಂದ ಪಂಪಿನ ಮೂಲಕ ನೀರು ಹಾಕಿ ಬಿತ್ತನೆ ಮಾಡಿದರೂ ಸಹ ಪ್ರಸ್ತುತ ಇದೀಗ ಕೆರೆಗಳಲ್ಲಿ ನೀರು ಬತ್ತಿಹೋಗಿರುವ ಪರಿಣಾಮ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ. ಹಲವಾರು ರೈತರು ಮಳೆಯನ್ನು ನಂಬಿಕೊಂಡು ಬೇಸಾಯ ಮಾಡಿರುವುದರಿಂದ ಮಳೆಯ ಕೊರತೆಯಿಂದ ಕಂಗಲಾಗಿದ್ದಾರೆ.

ಮಳೆಯ ಕೊರತೆ ಹೀಗೆಯೇ ಮುಂದುವರಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಬರಗಾಲ ಬರಬಹುದಾಗಿದೆ ಈ ಎಲ್ಲಾ ಹಿನ್ನಲೆಯಲ್ಲಿ ಸರಕಾರ ಸಂಬಂಧ ಪಟ್ಟ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ವರದಿ ತರಿಸಿಕೊಂಡು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಹಾಗೂ ಪ್ರಾಥಮಿಕ ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರದ ಮೂಲಕ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *