ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸಮೀಪ ಹೆದ್ದಾರಿ ಮಧ್ಯೆ ಟೇಬಲ್ ಇಟ್ಟು, ಟಿವಿ ಹಾಗೂ ಸಂಗೀತ ವ್ಯವಸ್ಥೆ ಅಳವಡಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಯುವಕನೊಬ್ಬನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಂಜಿತ್ ಸೋಮಯಾಜಿ (25) ಎಂದು ಗುರುತಿಸಲಾಗಿದೆ. ಸೋಮವಾರ ಹೆದ್ದಾರಿ ಮಧ್ಯೆ ಟೇಬಲ್ ಇಟ್ಟು ಟಿವಿ ಹಾಗೂ ಮ್ಯೂಸಿಕ್ ವ್ಯವಸ್ಥೆ ಅಳವಡಿಸಿ ವಿಚಿತ್ರವಾಗಿ ವರ್ತಿಸಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನ ಸವಾರರು ಆತಂಕಕ್ಕೀಡಾಗಿದ್ದರು.

ಉದ್ದನೆಯ ತಲೆಕೂದಲು ಮತ್ತು ಗಡ್ಡ ಹೊಂದಿದ್ದ ಯುವಕನ ವರ್ತನೆ ಕಂಡ ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆಯೂ ಆತ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ರಂಜಿತ್ ಮಾನಸಿಕ ಅಸ್ವಸ್ಥನಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ಇದಕ್ಕೆ ಸಂಬಂಧಿಸಿದ ಯಾವುದೇ ವೈದ್ಯಕೀಯ ದಾಖಲೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.


