ಮಂಗಳೂರು: ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ಉರ್ವ ಸ್ಟೋರ್ ನಿವಾಸಿ ಚೇತನ್ ರಾಮಚಂದ್ರ ಕರ್ಕೇರಾ (37) ಅವರು ಕಳೆದ ಎಂಟು ತಿಂಗಳಿನಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಚೇತನ್ ಅವರು 2025ರ ನವೆಂಬರ್ 9ರಂದು ಹಾಂಗ್ಕಾಂಗ್ಗೆ ಪ್ರವಾಸಕ್ಕೆ ತೆರಳುವುದಾಗಿ ಮನೆಯವರಿಗೆ ತಿಳಿಸಿ ಉರ್ವ ಸ್ಟೋರ್ನಲ್ಲಿರುವ ತಂದೆಯ ಮನೆಯಿಂದ ಹೊರಟಿದ್ದರು. ಮರುದಿನ ತಮ್ಮ ಪತ್ನಿ ವಿಜೇತಾ ಅವರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದು, ಅದಾದ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ನಂತರ ಯಾವುದೇ ಕರೆ ಅಥವಾ ಸಂದೇಶ ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಚೇತನ್ ಅವರ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಅವರು ದೂರವಾಣಿ ಕರೆ ಮಾಡಬಹುದು ಅಥವಾ ಮನೆಗೆ ಮರಳಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬಸ್ಥರು ಹಲವು ತಿಂಗಳು ಕಾದಿದ್ದರು. ಆದರೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಇದೀಗ ಎಂಟು ತಿಂಗಳ ಬಳಿಕ ಉರ್ವ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಚೇತನ್ ರಾಮಚಂದ್ರ ಕರ್ಕೇರಾ ಅವರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.


