ಮಂಗಳೂರು: ಸೈಂಟ್ ಆಂಟನಿಯವರ ಭಕ್ತರು ಆನೆಕಾಲು ಮತ್ತು ಕ್ಷಯರೋಗಿಗಳ ಆರೈಕೆಗಾಗಿ 18ನೇ ಶತಮಾನದಲ್ಲಿ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ಆರಂಭಿಸಿದ್ದ ಸೈಂಟ್ ಆಂಟನಿ ಆಶ್ರಮವು, ಇಂದು ನಿರಾಶ್ರಿತರಿಗೆ ಆಶ್ರಯ ನೀಡುವ ಕೇಂದ್ರವಾಗಿ ರೂಪಾಂತರಗೊಂಡಿದೆ ಎಂದು ಆಶ್ರಮದ ನಿರ್ದೇಶಕ ಫಾ. ಜೆ.ಬಿ. ಕ್ರಾಸ್ತಾ ಹೇಳಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕದ ಕಾರ್ಯಕಾರಿ ಸದಸ್ಯರ ಭೇಟಿ ವೇಳೆ ಸಂಸ್ಥೆಯ ಚಟುವಟಿಕೆಗಳು ಹಾಗೂ ತಾವು ಸ್ಥಾಪಿಸಿರುವ ಕ್ರೈಸ್ತ ಧರ್ಮದ ಮಾಹಿತಿ ಮ್ಯೂಸಿಯಂ ಕುರಿತು ಮಾಹಿತಿ ನೀಡಿದ ಅವರು, ಪೈಲೇರಿಯಾ ಮತ್ತು ಕ್ಷಯರೋಗಗಳ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಶ್ರಮದ ಸೇವೆಯ ಸ್ವರೂಪವೂ ಕಾಲಕ್ಕೆ ತಕ್ಕಂತೆ ಬದಲಾಗಿದೆ ಎಂದು ತಿಳಿಸಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕದ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಕೊಂಕಣಿ ಮಾತೃಭಾಷೆಯ ಹಿಂದೂ, ಕ್ರೈಸ್ತ, ಮುಸ್ಲಿಂ, ಕುಡುಬಿ, ಖಾರ್ವಿ, ಜಿಎಸ್‌ಬಿ ಹಾಗೂ ಸಿದ್ದಿ ಸಮುದಾಯದವರು ಮಂಡಳಿಯ ಸದಸ್ಯರಾಗಿದ್ದು, ಸರ್ವಧರ್ಮ ಸೌಹಾರ್ದವನ್ನು ಬಲಪಡಿಸಲು ಇಂತಹ ಪರಸ್ಪರ ಭೇಟಿಗಳು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖಜಾಂಚಿ ವಸಂತ್ ಕೆ. ರಾವ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಲಿಸ್ಟನ್ ಡಿಸೋಜ ವಂದಿಸಿದರು. ಉಪಾಧ್ಯಕ್ಷೆ ಮೀನಾಕ್ಷಿ ಪೈ, ಕಾರ್ಯಕಾರಿ ಸಲಹೆದಾರ ಗೀತಾ ಕಿಣಿ, ಸದಸ್ಯರಾದ ಝೀನಾ ಫರ್ನಾಂಡೀಸ್, ಎಡೋಲ್ಫ್ ಡಿಸೋಜ, ಜೊಸ್ಸಿ ಪಿಂಟೊ, ಲಾರೆನ್ಸ್ ಪಿಂಟೊ, ಶಾಂತಿ ವೆರೊನಿಕಾ ಹಾಗೂ ಆಹ್ವಾನಿತರಾದ ಸ್ಟೇನಿ ತಾವ್ರೊ, ಜೋನ್ ತಾವ್ರೊ, ಹೆರಾಲ್ಡ್ ಅಲ್ಬುಕರ್ಕ್ ಮತ್ತು ಜಿಲ್ಲೂಸ್ ಸಂಸ್ಥೆಯ ಜೂಲಿಯಾನ ಉಪಸ್ಥಿತರಿದ್ದರು.




