ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ಮೂರು ವರ್ಷಗಳ ಹಿಂದೆ ನೂರಕ್ಕೂ ಹೆಚ್ಚು ಬಡ ಜನರು ಗಿರವಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಜ್ಯುವೆಲರಿ ಅಂಗಡಿ ಮಾಲೀಕನನ್ನು ಹುಣಸೂರು ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ನಗರದ ಬಜಾರ್ ರಸ್ತೆಯ ‘ವಿನಾಯಕ ಜ್ಯುವೆಲರಿ’ ಮಾಲೀಕ ಪ್ರೀತೇಶ್ ಅಲಿಯಾಸ್ ಪಿಂಟು ಎಂದು ಗುರುತಿಸಲಾಗಿದೆ. ಈತ ತನ್ನ ಅಂಗಡಿಯಲ್ಲಿ ಚಿನ್ನಾಭರಣ ವ್ಯಾಪಾರದ ಜೊತೆಗೆ ಚಿನ್ನ ಅಡವಿಟ್ಟುಕೊಳ್ಳುವ ವ್ಯವಹಾರವನ್ನೂ ನಡೆಸುತ್ತಿದ್ದ. ಆದರೆ, ಸುಮಾರು ಮೂರು ವರ್ಷಗಳ ಹಿಂದೆ ಸಾರ್ವಜನಿಕರು ಗಿರವಿ ಇಟ್ಟಿದ್ದ ಚಿನ್ನಾಭರಣದೊಂದಿಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ.

ಘಟನೆ ಸಂಬಂಧ ಅಸಹಾಯಕ ಗ್ರಾಹಕರು ಹುಣಸೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆರೋಪಿಗಾಗಿ ವ್ಯಾಪಕ ಶೋಧ ನಡೆಸಿದ್ದರು. ಮೊಬೈಲ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದರಿಂದ ಆರೋಪಿಯ ಸುಳಿವು ಪತ್ತೆಯಾಗಿರಲಿಲ್ಲ.

ಆದರೆ, ಆರೋಪಿಯ ಕುಟುಂಬಸ್ಥರು ಮತ್ತು ಸ್ನೇಹಿತರ ಮೇಲೆ ನಿರಂತರ ನಿಗಾ ಇರಿಸಿದ್ದ ಪೊಲೀಸರಿಗೆ ಇತ್ತೀಚೆಗೆ ಆತ ಮಹಾರಾಷ್ಟ್ರದಲ್ಲಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡ, ಕೊನೆಗೆ ಗುಜರಾತ್ನ ಅಹಮದಾಬಾದ್ನಲ್ಲಿ ತಲೆಮರೆಸಿಕೊಂಡಿದ್ದ ಪ್ರೀತೇಶ್ ಅಲಿಯಾಸ್ ಪಿಂಟುವನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಡಿವೈಎಸ್ಪಿ ರವಿ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆ ಇನ್ಸ್ಪೆಕ್ಟರ್ ಶಿವಮಾದಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಟಿ.ಎಂ. ತಾಜುದ್ದೀನ್ ಹಾಗೂ ಸಿಬ್ಬಂದಿಗಳಾದ ಅರುಣ್, ಇರ್ಫಾನ್ ಮತ್ತು ರಾಜರತ್ನಂ ಭಾಗವಹಿಸಿದ್ದರು. ತನಿಖೆ ಮುಂದುವರಿದಿದೆ.



