Breaking
21 Mar 2026, Sat

ಶಾಂತಿ ಹುಟ್ಟುಹಾಕಲು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಹಾಗೂ ಎಸ್ಪಿ ಕಾರ್ಯ ಶ್ಲಾಘನೀಯ: ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ

ಪುತ್ತೂರು: ಕೋಮು ಭಾವನೆ ಕೆರಳಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಅರುಣ್ ಕುಮಾರ್ ಅವರ ಕಾರ್ಯ ಶ್ಲಾಘನೀಯ ಕೆಲಸ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.

ಈ ಕುರಿತು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಕೋಮು ಸಾಮರಸ್ಯ ಹುಟ್ಟುಹಾಕಲು ಗಡಿಪಾರು ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಹಕೀಂ, ಅಜಿತ್ ರೈ ಹೊನೆ, ಮನೀಷ್, ಅರುಣ್ ಕುಮಾರ್ ಪುತ್ತಿಲ ಮೊದಲಾದವರ ಹೆಸರು ಇದೆ. ಇವರುಗಳನ್ನು ಗಡಿಪಾರು ಮಾಡಿ, ಜಿಲ್ಲೆಯಲ್ಲಿ ಶಾಂತಿ ಹುಟ್ಟುಹಾಕಲು ನಡೆಸಿದ ಪ್ರಯತ್ನ ಪ್ರಸಂಶನೀಯ ಎಂದರು.

ದ.ಕ. ಜಿಲ್ಲೆಯ ಜನ ಶಾಂತಿ ಪ್ರೀಯರು ಅನ್ನುವುದರಲ್ಲಿ ಯಾರಿಗೂ ಸಂಶಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಕೋಮು ಆಧಾರಿತ ಹಿಂಸೆಗಳು ಆದಾಗ, ಕೋಮು ದಳ್ಳುರಿ, ಕೋಮು ಗಲಭೆಗಳು ಆದಾಗ, ಕೋಮು ಕೊಲೆಗಳು ಆದಾಗ ಸಂತೋಷ ಪಡುವ ಸಾಮಾನ್ಯ ನಾಗರಿಕರು ಯಾರೂ ಇಲ್ಲ. ಜನ ಬಯಸದೇ ಹೋದರೂ ಈ ಜಿಲ್ಲೆಯಲ್ಲಿ ಮತ್ತೆ ಮತ್ತೆ ಕೋಮು ಗಲಭೆಗಳು, ಧರ್ಮದ ಆಧಾರದಲ್ಲಿ ಅಮಾಯಕರ ಹತ್ಯೆಗಳು ನಡೆಯುತ್ತಲೇ ಇದೆ ಅನ್ನುವುದು ಅತ್ಯಂತ ಆಶ್ಚರ್ಯದ ವಿಷಯ.

ಆಶ್ಚರ್ಯವೆಂದರೆ ದ.ಕ. ಜಿಲ್ಲೆಯ ಶೇಕಡಾ 90ಕ್ಕಿಂತ ಹೆಚ್ಚು ಜನ ಬಯಸದ ಕೋಮುಗಲಭೆಗಳನ್ನು ಪ್ರಚೋದಿಸಿ ಅಮಾಯಕ ಜನರಿಂದ ಕೊಲೆ ಮಾಡಿಸುವವರು ಮತ್ತು ಅಮಾಯಕರ ಸಾವಿಗೆ ಕಾರಣರಾಗುವ ನಿಜವಾದ ಖಳನಾಯಕರು ತಮ್ಮ ತಮ್ಮ ಕೋಮುಗಳ ನಾಯಕರೆನಿಸಿಕೊಳ್ಳುವುದು. ಇದು ವಿಚಿತ್ರವಾದರೂ ಸತ್ಯ.

ಒಂದು ದ್ವೇಷ ಭಾಷಣ. ಅದರ ಪರಿಣಾಮವಾಗಿ ಒಂದು ಕೊಲೆ. ಅದಕ್ಕೆ ಪ್ರತೀಕಾರವಾಗಿ ಇನ್ನೊಂದು ಕೊಲೆ. ಹೀಗೆ ಕೊಲೆಗಳ ಸರಣಿ ಮುಂದುವರಿಯುತ್ತದೆ. ಒಂದು ಕೊಲೆಗೆ ಪ್ರತೀಕಾರವಾಗಿ ಇನ್ನೊಂದು ಕೊಲೆ ನಡೆಯುತ್ತದೆಯೆಂದಾದರೆ ಎರಡನೆಯದಾಗಿ ಕೊಲೆಯಾದವನ ಕೊಲೆಗೆ ಮೊದಲನೆಯವನನ್ನು ಕೊಂದವರೇ ಕಾರಣಕರ್ತರಾಗಿರುತ್ತಾರೆ.
ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಮಸೂದ್ ಎಂಬ ಯುವಕನನ್ನು ನಿಜವಾಗಿ ಕೊಂದವರು ಯಾರೆಂದರೆ ಅದು ದ್ವೇಷ ಭಾಷಣಗಳ ಮೂಲಕ ಆ ಯುವಕರ ತಲೆಗೆ ದ್ವೇಷ ತುಂಬಿದ ದ್ವೇಷ ಭಾಷಣಕಾರರೇ ಆಗಿದ್ದಾರೆ.

ದೇಶದಾದ್ಯಂತ ಸಂಚಲನ ಉಂಟುಮಾಡಿದ ಪ್ರವೀಣ್ ನೆಟ್ಟಾರ್ರವರ ಹತ್ಯೆಯ ಹಿಂದಿರುವ ನಿಜವಾದ ಕೊಲೆಗಾರರು ಯಾರು? ನೇರವಾಗಿ ಕೊಂದವರು ಯಾರೇ ಆಗಿದ್ದರೂ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಮಸೂದ್ ಎಂಬ ಯುವಕನನ್ನು ಕೊಂದವರೇ ಪ್ರವೀಣ್ ನೆಟ್ಟಾರುರವರ ನಿಜವಾದ ಕೊಲೆಗಾರರು.

ಸುರತ್ಕಲ್ನ ಫಾಝಿಲ್ ಎಂಬ ಅಮಾಯಕ ಯುವಕನನ್ನು ನಿಜವಾಗಿಯೂ ನಡುಬೀದಿಯಲ್ಲಿ ಕೊಲೆ ಮಾಡಿದವರು ಸುಹಾಸ್ ಶೆಟ್ಟಿ ಎಂಬ ರೌಡಿ ಶೀಟರ್ ಅಲ್ಲ , ಯಾರು ಪ್ರವೀಣ್ ನೆಟ್ಟಾರು ಅವರನ್ನು ಕೊಂದರೋ ಅವರೇ ಫಾಝಿಲ್ನ ಕೊಲೆಗಾರರು. ಅದೇ ರೀತಿ ಸುಹಾಸ್ ಶೆಟ್ಟಿಯನ್ನು ನಿಜವಾಗಿಯೂ ಕೊಂದವರು ಯಾರೆಂದರೆ ಫಾಝಿಲ್ನನ್ನು ಕೊಂದ ಕೊಲೆಗಾರರು.

ಇತ್ತೀಚೆಗೆ ಬಂಟ್ವಾಳದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ರವರನ್ನು ಕೊಂದವರು ಕೂಡಾ ಸುಹಾಸ್ ಶೆಟ್ಟಿಯನ್ನು ಕೊಂದವರೇ ಆಗಿದ್ದಾರೆ. ಅನ್ಯ ಧರ್ಮದ ಅಮಾಯಕನನ್ನು ಧರ್ಮದ ಹೆಸರಿನಲ್ಲಿ ಕೊಲ್ಲುವ ಮೂಲಕ ಇವರು ತಮ್ಮದೇ ಧರ್ಮದ ಇನ್ನೊಬ್ಬ ಅಮಾಯಕನ ಕೊಲೆಗೆ ಕಾರಣೀಕರ್ತರಾಗುತ್ತಾರೆ. ಆದರೆ ಈ ಎಲ್ಲಾ ಕೋಮು ಆಧಾರಿತ ಹತ್ಯೆಗಳ ಹಿಂದಿರುವ ಮೂಲ ಧಾತು ಯಾವುದೆಂದರೆ ಅದು ದ್ವೇಷ ಭಾಷಣ.

ಈ ದ್ವೇಷ ಭಾಷಣಗಾರರೇ ಈ ಎಲ್ಲಾ ಕೊಲೆಗಳ ಹಿಂದಿರುವ ನೈಜ ಅಪರಾಧಿಗಳು, ಸಮಾಜ ದ್ರೋಹಿಗಳು. ಈ ಕೊಲೆಗಳ ಸರಣಿಯನ್ನು ಆರಂಭಿಸುವುದು ಸುಲಭ , ಒಂದು ದ್ವೇಷ ಭಾಷಣ ಮಾಡಿ, ಕಡಿಯಿರಿ, ಕೊಲ್ಲಿ ಎಂದು ಕರೆ ! ಇದಕ್ಕೆ ಕೊನೆ ಎಂದು ? ಕೊಲ್ಲುವುದಕ್ಕೆ ಕಾರಣ ಬೇಡ, ವೈಯ್ಯಕ್ತಿಕ ದ್ವೇಷ ಬೇಡ , ಹಣಕಾಸಿನ ಜಗಳ ಬೇಡ ! ಕೇವಲ ಅನ್ಯ ಧರ್ಮೀಯನಾದರೆ ಸಾಕು ಎನ್ನುವುದಾದರೆ ಇಲ್ಲಿ ಜನ ನೆಮ್ಮದಿಯಿಂದ ಬದುಕುವುದು ಹೇಗೆ ? ಮನೆಯಿಂದ ಹೊರಗೆ ಮನೆಯ ಮಗ ಮತ್ತೆ ಮನೆಗೆ ಹಿಂತಿರುಗಿ ಬರುತ್ತಾನೆ ಎಂಬ ನಿರೀಕ್ಷೆ ಇಲ್ಲದೇ ಹದಿಹರೆಯದವರ ತಂದೆ ತಾಯಿ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಕಾಂಗ್ರೆಸ್ ವಕ್ತಾರರಾದ ರಾಮ ಮೇನಾಲ, ಚಂದ್ರಪ್ರಭಾ ಗೌಡ, ರವೀಂದ್ರ ನೆಕ್ಕಿಲು, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *