Breaking
25 Sep 2026, Fri

ಕಡಬ: ತಮ್ಮನ ಕ್ರೂರತೆಗೆ ಬಲಿಯಾದ ಅಣ್ಣ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಬಳಿ ಅಣ್ಣನ ಮೇಲೆ ತಮ್ಮ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅಣ್ಣ ಹನುಮಪ್ಪ (42) ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪ ಕೋರಿಯರ್ ರೈಲು ಟ್ರಾಕ್ ಬಳಿ ಜೂನ್ 8ರಂದು ಮಧ್ಯಾಹ್ನ ಈ ಘಟನೆ ನಡೆದಿತ್ತು. ಮೃತ ಹನುಮಪ್ಪ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿಯಾಗಿದ್ದು, ಸಹೋದರ ನಿಂಗಪ್ಪ (21) ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಹನುಮಪ್ಪ ವಿಪರೀತ ಕುಡಿತದ ಚಟ ಹೊಂದಿದ್ದು, 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದನು. ಅಲ್ಲದೆ ಆರೋಪಿ ಸಹೋದರನ ಜತೆಗೂ ಗಲಾಟೆ ಮಾಡಿಕೊಂಡಿದ್ದನು. ಹನುಮಪ್ಪನ ಹಿಂಸೆಯಿಂದ ರೋಸಿ ಹೋಗಿ ತಮ್ಮ ನಿಂಗಪ್ಪ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

ಕಡಬ ಠಾಣಾ ಎಸ್ ಐ ಅಭಿನಂದನ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ವಿಭಾಗದ ರೈಲ್ವೆ ಪೊಲೀಸ್ ಇನ್ಸೆಕ್ಟರ್ ಜಯಾನಂದ, ಎಎಸ್‌ಐ ಮಧುಚಂದ್ರ, ವಿಧಿವಿಜ್ಞಾನ ತಂಡ ಹಾಗೂ ರೈಲ್ವೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *