Breaking
22 Mar 2026, Sun

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಎನ್ ಐ ಎ(NIA) ಹೆಗಲಿಗೆ: ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದ ಸುಹಾಸ್ ಶೆಟ್ಟಿ ತಾಯಿ

ಮಂಗಳೂರು: ನಗರದ ಬಜ್ಪೆಯ ಕಿನ್ನಿಪದವು ಎಂಬಲ್ಲಿ ಮೇ 1 ರಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಬರ್ಬರವಾಗಿ ಹತ್ಯೆಯಾಗಿದ್ದರು. ಈ ಘಟನೆಯು ಕರಾವಳಿ ಭಾಗದಲ್ಲಿ ಭಾರೀ ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು.

ಈ ಹತ್ಯೆಯ ಹಿಂದೆ ಸ್ಥಳೀಯರ, ಕೆಲ ಅಧಿಕಾರಿಗಳ ಹಾಗೂ ಭಯೋತ್ಪಾದಕರ ಕೈವಾಡವಿದೆ ಎಂದು ಶಂಕಿಸಿದ್ದ ಹಿಂದೂ ಸಂಘಟನೆಗಳು, ಬಿಜೆಪಿ ಹಾಗೂ ಮೃತ ಸುಹಾಸ್ ಶೆಟ್ಟಿ ತಂದೆ-ತಾಯಿ, ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ಆಗ್ರಹಿಸಿದ್ದರು.ಅದರಂತೆ ನಿನ್ನೆ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು.ಸರ್ಕಾರದ ಈ ನಿರ್ಧಾರಕ್ಕೆ ಸುಹಾಸ್ ಶೆಟ್ಟಿಯವರ ತಾಯಿ ಸುಲೋಚನಾ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಇದೇ ವೇಳೆ ಅವರು, ತಮ್ಮ ಮಗನ ಕೊಲೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಗನನ್ನು ಚಿತ್ರಹಿಂಸೆಗೊಳಪಡಿಸಿ, ಭೀಕರವಾಗಿ ಕೊಲೆ ಮಾಡಲಾಗಿದೆ. ಆತ ಬಜರಂಗದಳ ಕಾರ್ಯಕರ್ತನಾಗಿದ್ದ ಕಾರಣಕ್ಕೆ ಈ ಕೃತ್ಯ ನಡೆದಿದೆ. ಕರ್ನಾಟಕ ಸರ್ಕಾರದ ಮೇಲೆ ನಮಗೆ ಯಾವುದೇ ನಂಬಿಕೆ ಇರಲಿಲ್ಲ. ರಾಜ್ಯ ಸರ್ಕಾರದ ಯಾವುದೇ ನಾಯಕರು ನಮ್ಮ ಮನೆಗೆ ಭೇಟಿ ನೀಡಿಲ್ಲ, ಏನಾಯಿತು ಎಂದು ವಿಚಾರಿಸಿಲ್ಲ. ಅವರು ಕೇವಲ ಮುಸ್ಲಿಂ ಸಮುದಾಯದವರೊಂದಿಗೆ ಸಭೆಗಳನ್ನು ನಡೆಸಿ ಹೋಗುತ್ತಿದ್ದರು. ಇದರಿಂದ ಸರ್ಕಾರ ಅವರ ಪರವಾಗಿದೆ ಎಂದು ಅನಿಸುತ್ತಿತ್ತು,ಆದರೆ ಕೇಂದ್ರ ಸರ್ಕಾರ ನನ್ನ ಮಗನ ಸಾವಿನ ತನಿಖೆಯನ್ನು ಎನ್ ಐ ಎ ಗೆ ವಹಿಸಿದೆ ಅದಕ್ಕೆ ಧನ್ಯವಾದಗಳು ” ಎಂದು ಮೃತ ಸುಹಾಸ್ ತಾಯಿ ಸುಲೋಚನಾ ಅವರು ತಿಳಿಸಿದರು.

Leave a Reply

Your email address will not be published. Required fields are marked *