Breaking
22 Mar 2026, Sun

ಬಾಲ್ಯದ ಕನಸನ್ನು ನನಸಾಗಿಸಿದ ಯುವತಿ : ಭಾರತೀಯ ನೌಕಾಪಡೆಯ ಪೈಲಟ್ ಆಗಿ ಆಯ್ಕೆ

ಉಡುಪಿ : ಭಾರತೀಯ ನೌಕಾಪಡೆಯ ಪೈಲಟ್ ಆಗಬೇಕು ಎಂದು ಬಾಲ್ಯದಿಂದಲೇ ಕನಸು ಹೊತ್ತಿದ್ದ ಉಡುಪಿ ಜಿಲ್ಲೆಯ ಯುವತಿಯೋರ್ವಳು ಆ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಪೆರ್ಣಂಕಿಲ ಕೃಷಿಕ ಸದಾನಂದ ನಾಯಕ್ ಮತ್ತು ಖಾಸಗಿ ಶಾಲೆಯೊಂದರಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಜಯಶ್ರೀ ತೆಂಡೂಲ್ಕರ್ ದಂಪತಿಯ ಪುತ್ರಿ ಸೀಮಾ ತೆಂಡೂಲ್ಕರ್ ಅವರು ಭಾರತೀಯ ನೌಕಾಪಡೆಯಲ್ಲಿ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.

ಹಿರಿಯಡಕದ ಖಾಸಗಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಬಳಿಕ ಕಾರ್ಕಳದ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.

ಭಾರತೀಯ ನೌಕಾಪಡೆಯ ಪೈಲಟ್ ಆಗಲೇ ಬೇಕೆಂದು ಪರಿಶ್ರಮ ಪಟ್ಟ ಅವರು ಸಶಸ್ತ್ರ ಪಡೆಗಳು ನಡೆಸಿದ ನೇರ ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಿದರು. ಆ ಬಳಿಕ ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾದರು. ಪ್ರಸ್ತುತ ಅವರು ಕೇರಳದ ಭಾರತೀಯ ನೌಕಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡ ಸೀಮಾ, 2022ರಲ್ಲಿ ಗಣರಾಜ್ಯೋತ್ಸವ ಪರೇಡ್‌ನ ಗಾರ್ಡ್ ಆಫ್ ಆನರ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

ಈ ಕುರಿತು ಸಂತಸ ಹಂಚಿಕೊಂಡ ಸೀಮಾ “ನನಗೆ ಚಿಕ್ಕಂದಿನಿಂದಲೂ ಭಾರತೀಯ ಸೇನೆಯನ್ನು ಸೇರಬೇಕೆಂಬ ಆಸೆ ಇತ್ತು. ಅದಕ್ಕಾಗಿಯೇ ನಾನು ಎನ್‌ಸಿಸಿಗೆ ಸೇರಿದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದಾಗ ನನ್ನ ಆಸೆ ಮತ್ತಷ್ಟು ದೊಡ್ಡದಾಯಿತು. ನನ್ನ ಕನಸು ನನಸಾಗಿರುವುದರಿಂದ ನಾನು ಅತ್ಯಂತ ಸಂತೋಷವಾಗಿದ್ದೇನೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *