ಮಂಗಳೂರ: ಕದ್ರಿ ಶ್ರೀ ಮಂಜುನಾಥ ದೇವಾಲಯದ ಕೆರೆಯೊಂದರಲ್ಲಿ ಪುರಾತತ್ವ ಅನ್ವೇಷಣೆಯ ವೇಳೆ ಬುದ್ಧನ ಶಿಲ್ಪ ಮತ್ತು ಗುಹಾ ಸಮುಚ್ಚಯ ಪತ್ತೆಯಾಗಿದೆ.
ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯ ಸಂದರ್ಭದಲ್ಲಿ ಅಪೂರ್ವವಾದ ಬುದ್ದನ ಶಿಲ್ಪ ಮತ್ತು ಗುಹಾ ಸಮುಚ್ಚಯ ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಶಿಲ್ಪವನ್ನು ಕದ್ರಿ ದೇವಾಲಯದ ಆಡಳಿತಾಧಿಕಾರಿಗಳ ಅನುಮತಿಯೊಂದಿಗೆ ಮೇಲೆ ತೆಗೆದು ಅಧ್ಯಯನ ನಡೆಸಿದ್ದಾರೆ.

ಕದ್ರಿ ದೇವಾಲಯದ ಹೊರ ಆವರಣದಲ್ಲಿರುವ ಸ್ತಂಭದ ಕೆಳಭಾಗದ ಫಲಕಗಳಲ್ಲಿ ಪದ್ಮಪೀಠದ ಮೇಲೆ ಕುಳಿತ ಧ್ಯಾನಿ ಬುದ್ಧರ ಉಬ್ಬುಶಿಲ್ಪಗಳಿವೆ. ಆದ್ದರಿಂದ ಈ ಶಿಲ್ಪವನ್ನು ಬುದ್ಧನ ಶಿಲ್ಪವೆಂದು ಗುರುತಿಸಲಾಗಿದೆ.
ಈ ಶಿಲ್ಪವು ಪದ್ಮಪೀಠದ ಮೇಲೆ ಪದ್ಮಾಸನದಲ್ಲಿ ಧ್ಯಾನಮುದ್ರೆಯಲ್ಲಿ ಕುಳಿತಂತೆ ಕಾಣುತ್ತಿದೆ. ತಲೆಯ ಭಾಗ ತುಂಡಾಗಿದೆ. ಶಿಲ್ಪದ ಬಲಗೈ ಸಂಪೂರ್ಣ ತುಂಡಾಗಿದ್ದು, ಎಡಗೈಯ ಹಸ್ತ ಮಡಚಿದ ಕಾಲುಗಳ ಮಧ್ಯೆ ಇರಿಸಲ್ಪಟ್ಟಿದೆ. ಎಡಭುಜದ ಮೇಲಿಂದ ಹಾದು ಬಂದಿರುವ ಉತ್ತರೀಯ, ಶಿಲ್ಪದ ಎಡಭಾಗದ ಎದೆಯ ಮೇಲೆ ಚಪ್ಪಟೆಯಾಗಿ ಇಳಿಬಿಟ್ಟಂತೆ ಅಸ್ಪಷ್ಟವಾಗಿದೆ.

ಈ ಶಿಲ್ಪವು ಕ್ರಿ.ಶ. 4-6ನೇ ಶತಮಾನದ ಶಿಲ್ಪವೆಂದು ಗುರುತಿಸಲಾಗಿದೆ. ಶಿಲ್ಪವು 68 ಸೆಂ.ಮೀ. ಎತ್ತರವಾಗಿದ್ದು, 48 ಸೆಂ.ಮೀ. ಅಗಲವಾಗಿದೆ. ಶಿಲ್ಪವು ಪದ್ಮದ ಕೆಳಭಾಗದಲ್ಲಿ ಪಾಣಿಪೀಠದ ಒಳಗೆ ಸಿಕ್ಕಿಸುವ ಗೂಟವನ್ನು ಹೊಂದಿದ್ದು, ಇದುವೇ ಕದ್ರಿಯ ಮೂಲಸ್ಥಾನ ವಿಗ್ರಹವಾಗಿತ್ತೆಂದು ಭಾವಿಸಲಾಗಿದೆ.
ಈ ಅನ್ವೇಷಣೆಯಲ್ಲಿ ಮಣಿಪಾಲ್ ವಿ.ವಿ. ಪಿ.ಎಚ್‌ಡಿ. ವಿದ್ಯಾರ್ಥಿ ಶ್ರೇಯಸ್ ಕೊಳಪೆ, ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಪುರಾತತ್ವ ವಿಭಾಗದ ಉಪನ್ಯಾಸಕ ಶ್ರೇಯಸ್ ಬಂಟಕಲ್ಲು, ಕಾಲೇಜಿನ ಪುರಾತತ್ವ ವಿಭಾಗದ ವಿಧ್ಯಾರ್ಥಿ ರವೀಂದ್ರ ಕುಶ್ವಾ, ಮಂಗಳೂರು ವಿ.ವಿ. ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಭಾಗವಹಿಸಿದ್ದಾರೆ. ಕದ್ರಿ ದೇವಾಲಯದ ಆಡಳಿತಾಧಿಕಾರಿ ಅರುಣ್ ಕುಮಾರ್ ಸಹಕರಿಸಿದ್ದರು.


