ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಐವರು ಬಾಂಗ್ಲಾದೇಶ ಮೂಲದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆಯಿಂದ ದೊರೆತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಹಾಂಗೀರ್, ಫೈಸುದ್ದೀನ್, ನುಮನ್ ಬಶೀರ್, ಮಹಮದ್ ಹುಮೈನ್ ಹಾಗೂ ಮಹಮದ್ ಹಸೀಬುಲ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಚಿಕ್ಕಮಗಳೂರಿನ ಡಿಆರ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ವಶಕ್ಕೆ ಪಡೆದವರ ಬಳಿ ಬಾಂಗ್ಲಾದೇಶದ ಅಧಿಕೃತ ಗುರುತಿನ ಚೀಟಿಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ವರದಿ ಸಲ್ಲಿಸಿದ್ದಾರೆ.

ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಲೆನಾಡಿನ ಕಾಫಿ ತೋಟಗಳಲ್ಲಿ ಇನ್ನೂ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರಿರುವ ಸಾಧ್ಯತೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



