Breaking
19 Sep 2026, Sat

ಉಳ್ಳಾಲ: ಆಕಸ್ಮಿಕ ಬೆಂಕಿ ಅವಘಡ : ಸುಟ್ಟು ಕರಕಲಾದ ಮನೆ

ಉಳ್ಳಾಲ: ತಡರಾತ್ರಿ ಆಕಸ್ಮಿಕವಾಗಿ ಮನೆಯೊಂದಕ್ಕೆ ಬೆಂಕಿ ತಗುಲಿ ಮನೆಯೊಳಗಿದ್ದ ಸಾಮಾಗ್ರಿಗಳು ಸುಟ್ಟು ಕರಕಲಾಗಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲ ವೈದ್ಯನಾಥನಗರದಲ್ಲಿ ಜೂನ್‌ 6ರಂದು ನಡೆದಿದೆ.

ಬಗಂಬಿಲ ವೈದ್ಯನಾಥನಗರ ನಿವಾಸಿ ಸುಶೀಲ ಮಡಿವಾಳ್ತಿ ಎಂಬವರ ಮನೆಯಲ್ಲಿ ಅವಘಢ ಸಂಭವಿಸಿದ್ದು, ಘಟನೆ ಸಂದರ್ಭ ಸುಶೀಲಾ ಸೇರಿದಂತೆ ಅವರ ಪುತ್ರಿ ಆಶಾ, ಪತಿ ಜನಾರ್ದನ, ಸುಶಿಲಾ ಸಹೋದರಿ ಮೀರಾ ಎಲ್ಲರೂ ಮನೆ ಸಮೀಪವೇ ಜರಗಿದ ಸಂಬಂಧಿಕರ ಮೆಹೆಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ವಾಪಸ್ಸಾಗುವಾಗ ಸುಶೀಲಾ ಅವರು ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಮನೆಯೊಳಗೆ ಬೆಂಕಿ ಗೋಚರಿಸಿದೆ.

ತಕ್ಷಣವೇ ಮಹೆಂದಿಯಲ್ಲಿ ಭಾಗವಹಿಸಿದ್ದ ಮಂದಿಗೆ ಕೂಗಿ ಕರೆದಿದ್ದು, ಸ್ಥಳೀಯರು ನೆಂಟರು ಸೇರಿಕೊಂಡು ಮನೆಯೊಳಗಡೆ ಇದ್ದ ತುಂಬಿದ ಗ್ಯಾಸ್ ಸಿಲಿಂಡರ್ ಗಳನ್ನು ಮೊದಲಿಗೆ ಹೊರಗೆ ಎಸೆದಿದ್ದಾರೆ. ನಂತರ ಬೆಂಕಿ ನಂದಿಸಲು ಯತ್ನಿಸಿದರೂ ಬೆಂಕಿಯ ಕೆನ್ನಾಲೆ ವ್ಯಾಪಿಸಿದ್ದರಿಂದಾಗಿ ಆರಿಸಲು ಸಾಧ್ಯವಾಗಲಿಲ್ಲ, ಪರಿಣಾಮ ಮನೆಯೊಳಗೆ ಇದ್ದಂತಹ ಗ್ರೈಂಡರ್, ರೆಫ್ರಿಜರೇಟರ್, ಟಿ.ವಿ, ಫ್ಯಾನ್, ಬಟ್ಟೆಬರೆಗಳು, ಕಪಾಟುಗಳು ಸೇರಿದಂತೆ ಮನೆ ಸಂಪೂರ್ಣ ಸುಟ್ಟುಕರಕಲಾಗಿದೆ.

ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *