ಕಲ್ಲಡ್ಕ: ಶ್ರೀ ನಾರಾಯಣಗುರುಗಳ ಸಂದೇಶಗಳು ಇಂದಿನ ಸಮಾಜ ಮತ್ತು ಜೀವನ ಮೌಲ್ಯಗಳಿಗೆ ಅತ್ಯಂತ ಪ್ರಸ್ತುತವಾಗಿದ್ದು, ಸಮಾನತೆ, ಮಾನವೀಯತೆ, ಶಿಕ್ಷಣ ಹಾಗೂ ಸೌಹಾರ್ದತೆಯ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಡಾ. ತ್ರಿವೇಣಿ ರಮೇಶ್ ಹೇಳಿದರು.

ಅವರು ಜುಲೈ 16ರಂದು ನರಹರಿನಗರ, ಕಲ್ಲಡ್ಕದ ಶೇಖರ ಪೂಜಾರಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ‘ಗುರುತತ್ವವಾಹಿನಿ ಮಾಲಿಕೆ–71’ ಭಜನಾ ಸಂಕೀರ್ತನೆ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.

ಶ್ರೀ ನಾರಾಯಣಗುರುಗಳ ತತ್ವಾದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವು ಇಡೀ ಮಾನವಕುಲಕ್ಕೆ ದಾರಿದೀಪವಾಗಿದ್ದು, ಜಾತಿ-ಧರ್ಮ ಹಾಗೂ ಭೇದಭಾವಗಳನ್ನು ಮೀರಿ ಪ್ರೀತಿ, ಸೇವೆ ಮತ್ತು ಸಹಬಾಳ್ವೆಯ ಬದುಕನ್ನು ನಡೆಸುವಂತೆ ಗುರುಗಳು ಬೋಧಿಸಿದ ಸಂದೇಶಗಳು ಇಂದಿನ ಸಮಾಜಕ್ಕೂ ಸಮಾನವಾಗಿ ಅನ್ವಯಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೋಡಾಜೆ, ಬಂಟ್ವಾಳ ಘಟಕದ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಚಿನ್ನಾ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಸುನಿತಾ ನಿತಿನ್ ಮಾರ್ನಬೈಲ್, ಜಗನ್ನಾಥ್ ಕಲ್ಲಡ್ಕ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ಸದಸ್ಯರಾದ ಯಶೋಧರ ಕಡಂಬಲಿಕೆ, ವಿಘ್ನೇಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ಜಗನ್ನಾಥ ಸುವರ್ಣ ಕಲ್ಲಡ್ಕ, ಮೋಹನ್ ಪೂಜಾರಿ ಇರಂತಬೆಟ್ಟು, ದಿಶಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ರಾಜ್ ಪೂಂಜರೆಕೋಡಿ ಸ್ವಾಗತಿಸಿದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ಧನ್ಯವಾದ ಸಲ್ಲಿಸಿದರು.


