Breaking
17 Jul 2026, Fri

ಕೊಣಾಜೆ : ಕಣಚೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಪ್ರಕರಣ: ವಿದ್ಯಾರ್ಥಿನಿ ಬಂಧನ

ಕೊಣಾಜೆ : ಬಾಂಬ್ ಬೆದರಿಕೆ ಕರೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಅದೇ ಕಾಲೇಜಿನ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ವಿದ್ಯಾರ್ಥಿನಿ ,ಡಾ. ಚಲಸಾನಿ ಮೋನಿಕಾ ಚೌಧರಿ ಎಂದು ತಿಳಿದು ಬಂದಿದೆ.

ಜೂನ್ 4 ರಂದು ಬೆಳಿಗ್ಗೆ 8. 45ರ ವೇಳೆಗೆ ಕಣಚೂರು ಆಸ್ಪತ್ರೆಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಕರೆ ಬಂದಿತ್ತು. 11 ಗಂಟೆಯೊಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಬಂದ ಹಿನ್ನೆಲೆಯಲ್ಲಿ 25 ರಿಂದ 30 ಮಂದಿ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಪರಿಶೀಲಿಸಿದಾಗ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರಲಿಲ್ಲ.

ಬಾಂಬ್ ಕರೆಯಿಂದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಭಯಬೀತರಾಗಿದ್ದರು. ಪಿಜಿ ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿ ಬಾಂಬ್ ಬೆದರಿಕೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ದೂರು ನೀಡಿದ ಮೋನಿಕಾ ಚೌಧರಿಯೇ ಆರೋಪಿ ಎಂದು ತಿಳಿದುಬಂದಿದೆ.

ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಮೋನಿಕಾ ಅಂದು ಸೆಮಿನಾ‌ರ್ ನೀಡಬೇಕಾಗಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ತಾನೇ ಕರೆ ಮಾಡಿ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ದೂರು ನೀಡಿದ್ದಳು. ಸದ್ಯ ಆಕೆಯ ಮೊಬೈಲ್ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿ, ತನಿಖೆ ಮುಂದುವರಿಸಿದ್ದಾರೆ

Leave a Reply

Your email address will not be published. Required fields are marked *