ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ತೀವ್ರಗೊಂಡಿದೆ.
ಈ ಕುರಿತು ಅವರ ಪುತ್ರ ತಂದೆಯ ಮೊಬೈಲ್ಗೆ ಬಂದಿರುವ ಕರೆಗಳ ಕುರಿತು ತನಿಖೆ ನಡೆಸುವಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಮೇಶ್ ರೈ ಅವರ ಬೈಕ್ ಹಾಗೂ ಇತರ ಸೊತ್ತುಗಳು ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಪತ್ತೆಯಾಗಿತ್ತು.
ಬಳಿಕ ಅವರ ಮೃತದೇಹ ನದಿಗೆ ತಾಗಿಕೊಂಡು ನಿರ್ಮಾಣವಾದ ಟ್ಯಾಂಕ್ ಮಾದರಿಯ ಜಾಕ್ ವೆಲ್ನಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ಕುರಿತು ಸಂಶಯಗಳಿದ್ದು, ಅವರಿಗೆ ಬರುತ್ತಿದ್ದ ಕರೆಗಳನ್ನು ತನಿಖೆ ಮಾಡಬೇಕು ಎಂದು ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೊಬೈಲ್ನ ಸಿಮ್ ಅನ್ನು ತಾಂತ್ರಿಕ ವಿಭಾಗದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.


