ಭರತ್ ನಮ್ಮ ಕಾರ್ಯಕರ್ತ ಅನ್ನೋ ಕಾರಣಕ್ಕಾಗಿ ಟಾರ್ಗೆಟ್ ಮಾಡ್ತಾ ಇದ್ದಾರೆ:ಪ್ರಭಂಜನ್ ಸೂರ್ಯ ಆರೋಪ

ಮಂಗಳೂರು: ಬಂಟ್ವಾಳ ರೆಹಮಾನ್ ಹತ್ಯೆ ಕೇಸ್ ನಲ್ಲಿ ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್ ಮಾಡಲಾಗ್ತಿದೆ. ಪೊಲೀಸರನ್ನ ಬಳಸಿ ಸಂಘಟನೆ ಕಾರ್ಯಕರ್ತರ ಮೇಲೆ ಸರ್ಕಾರ ಪ್ರಕರಣ ದಾಖಲಿಸಿ ಗಡೀಪಾರು, ರೌಡಿಶೀಟರ್ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ತಿದೆ. ಪುತ್ತೂರು ಹಾಗೂ ಇತರೆಡೆ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ರಾತ್ರಿ ವೇಳೆ ಹೋಗ್ತಾ ಇದಾರೆ. ಎಲ್ಲಾ ಕೇಸ್ ಗಳನ್ನ ಸಂಘಟನೆ ಮೇಲೆ ತರುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದ್ದು, ಇದರೊಂದಿಗೆ ಕರಾವಳಿ ಭಾಗದಲ್ಲಿ ಹಿಂದೂ ಸಂಘಟನೆಗಳನ್ನ ಮಟ್ಟ ಹಾಕುವ ಕೆಲಸ ಆಗ್ತಿದೆ ಎಂದು ಪ್ರಾಂತ ಬಜರಂಗದಳ ಸಂಯೋಜಕ ಪ್ರಭಂಜನ್ ಸೂರ್ಯ ಆರೋಪಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು ಕೊಳ್ತಮಜಲು ರಹಿಮಾನ್ ಹತ್ಯೆ ಪ್ರಕರಣದಲ್ಲಿ ಬಜರಂಗದಳ ಮುಖಂಡ ಭರತ್ ಕುಮ್ಮೇಲು ಅವರನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರವನ್ನು ನಾವು ಖಂಡಿಸುತ್ತೇವೆ, ಒಂದು ವೇಳೆ ಬಂಧಿಸಿದ್ದೇ ಆದಲ್ಲಿ ರಾಜ್ಯ ವ್ಯಾಪಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೆಹಮಾನ್ ಹತ್ಯೆ ವೈಯಕ್ತಿಕ ಹಾಗೂ ಮರಳು ದಂಧೆ ಕಾರಣಕ್ಕಾಗಿ ನಡೆದಿದೆ ಎನ್ನಲಾಗಿದೆ.ಹಾಗಾಗಿ ಅವುಗಳ ಬಗ್ಗೆ ಪೊಲೀಸರು ತನಿಖೆ ನಡೆಸಲಿ, ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಸಿಲುಕಿಸಲು ಯತ್ನಿಸಿದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದರು .

ಭರತ್ ಕುಮ್ಡೇಲು ಭಾಷಣಗಳ ಮೇಲೆ ಕೇಸ್ ಆಗಿದೆ, ಅದು ನಡೀತಾ ಇದೆ.ಅವರು ಆ ಹೊತ್ತಿನಲ್ಲಿ ಅವರ ಭಾವನೆ ವ್ಯಕ್ತಪಡಿಸಿರಬಹುದು. ಸರ್ಚ್ ವಾರೆಂಟ್ ಇಲ್ಲದೇ ಪೊಲೀಸರು ಭರತ್ ಮನೆಯಲ್ಲಿ ಹುಡುಕಾಟ ಮಾಡಿದ್ದಾರೆ. ತನಿಖೆಗೆ ನಮ್ಮ ಯಾವುದೇ ಅಭ್ಯಂತರ ಇಲ್ಲ, ಆದರೆ ಕಾನೂನು ಪ್ರಕಾರ ಮಾಡಲಿ. ರಾಜಕೀಯ ಉದ್ದೇಶಕ್ಕಾಗಿ ಪೊಲೀಸರನ್ನ ಬಳಸೋದು ಸರಿಯಲ್ಲ, ರೆಹಮಾನ್ ಹತ್ಯೆಯನ್ನು ನಮ್ಮ ಸಂಘಟನೆ ಸಮರ್ಥನೆ ಮಾಡಲ್ಲ, ನಮ್ಮ ಸಂಘಟನೆಯನ್ನು ಬೇರೆ ಸಂಘಟನೆ ಜೊತೆ ಥಳುಕು ಹಾಕೋದು ಸರಿಯಲ್ಲ. ಭರತ್ ನಮ್ಮ ಕಾರ್ಯಕರ್ತ ಅನ್ನೋ ಕಾರಣಕ್ಕಾಗಿ ಟಾರ್ಗೆಟ್ ಮಾಡ್ತಾ ಇದಾರೆ.ಭರತ್ ಕುಮ್ಡೇಲು ಬಂಧನವಾದ್ರೆ ನಮ್ಮ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *