ಧರ್ಮಸ್ಥಳ: ಕಾಡಾನೆ ದಾಳಿಯಿಂದ ಆಟೋರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಜೂ.6ರಂದು ಮುಂಜಾನೆ ನಡೆದಿದೆ.
ಬೊಳಿಯಾರು ನಿವಾಸಿ ದಿನೇಶ್ ಎಂಬವರ ಆಟೋರಿಕ್ಷಾ ಎಂದು ತಿಳಿದು ಬಂದಿದೆ.

ಮುಂಜಾನೆ 5.30 ಗಂಟೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪದಲ್ಲಿ ಕಾಡಾನೆಗಳ ಹಿಂಡು ರಸ್ತೆ ಮಧ್ಯೆ ಎದುರಾಗಿದ್ದು ದಿನೇಶ್ ಇದನ್ನು ಗಮನಿಸಿ ಆತಂಕಗೊಂಡು ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ದೂರದಲ್ಲಿ ಅಡಗಿ ನಿಂತರು.
ಈ ವೇಳೆ ಗುಂಪಿನಲ್ಲಿದ್ದ ದೊಡ್ಡ ಕಾಡಾನೆಯೊಂದು ರಿಕ್ಷಾದ ಮೇಲೆ ದಾಳಿ ನಡೆಸಿ ರಿಕ್ಷಾವನ್ನು ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ. ಇದನ್ನು ಕಂಡ ದಿನೇಶ್ ಗಾಬರಿಗೊಂಡು ಸ್ಥಳದಲ್ಲಿಯೇ ಮೂರ್ಛೆ ಹೋಗಿದ್ದಾರೆ.

ರಿಕ್ಷಾವನ್ನು ಪುಡಿ ಮಾಡುತ್ತಿರುವ ಶಬ್ದ ಕೇಳಿ ದಿನೇಶ್ ರವರ ಪತ್ನಿ ಹಾಗೂ ನೆರೆಯವರಿಗೆ ಸ್ಥಳಕ್ಕೆ ಬಂದು ದಿನೇಶ್ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದರು.
ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



