Breaking
24 Mar 2026, Tue

ನಟ್ಟಿಬೈಲ್ನ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಗುಟ್ಕಾ ಪ್ಯಾಕೇಟ್,ರಾಶಿಗಟ್ಟಲೆ ಕಸ ಪತ್ತೆ: ಸ್ಥಳೀಯ ನಿವಾಸಿಗಳ ಆಕ್ರೋಶ

ಉಪ್ಪಿನಂಗಡಿ: ಕುಡಿಯುವ ನೀರಿನ ಟ್ಯಾಂಕ್ನ ತಳಭಾಗದಲ್ಲಿ ರಟ್ಟಿನ ಬಾಕ್ಸ್, ಕಬ್ಬಿಣದ ರಾಡ್, ಗುಟ್ಕಾ ಪ್ಯಾಕೇಟ್ಗಳು ಸೇರಿದಂತೆ ರಾಶಿಗಟ್ಟಲೆ ಕಸ ಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯ ನಟ್ಟಿಬೈಲ್ ಎಂಬ ಪ್ರದೇಶದಲ್ಲಿ ನಡೆದಿದೆ.

ಕಳೆದ 1 ವರ್ಷದಿಂದ ನಟ್ಟಿಬೈಲ್ ನಲ್ಲಿರುವ ಗ್ರಾ.ಪಂ.ನ ಕುಡಿಯುವ ಈ ನೀರಿನ ಟ್ಯಾಂಕ್ನ ತಳಭಾಗದಲ್ಲಿ ಇದೇ ರೀತಿಯ ಸಮಸ್ಯೆಗಳು ತಾಂಡವಾಡುತ್ತಿದ್ದು,ಪರಿಸರದ ನಿವಾಸಿಗಳು ಅಧಿಕಾರಿಗಳ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಜೀವನ್ ಮೆಷಿನ್ ಯೋಜನೆಯಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ನಟ್ಟಿಬೈಲ್ನಲ್ಲಿ ಕುಡಿಯುವ ನೀರಿನ ಟ್ಯಾಂಕ್ವೊಂದನ್ನು ನಿರ್ಮಿಸಿತ್ತು. ಇದರ ಕಾಮಗಾರಿ ಮುಗಿದ ಬಳಿಕ ಅಂದರೆ ಸುಮಾರು ಒಂದು ವರ್ಷಗಳ ಹಿಂದೆ ಇದನ್ನು ಗ್ರಾ. ಪಂ. ಗೆ ಹಸ್ತಾಂತರ ಮಾಡಿತ್ತು. ಈ ಕಾಮಗಾರಿಯ ಸಂದರ್ಭ ರಟ್ಟಿನ ಬಾಕ್ ಗಳು, ಕಬ್ಬಿಣದ ರಾಡ್ಗಳು, ಗುಟ್ಕಾ ಪ್ಯಾಕೇಟ್ಗಳು, ಕಾರ್ಡ್ ಬೋರ್ಡ್ ಗಳು, ಪ್ಲಾಸ್ಟಿಕ್ಗಳು ಸೇರಿದಂತೆ ಇನ್ನಿತರ ಕಸಕಡ್ಡಿ ಗಳು ಟ್ಯಾಂಕ್ನೊಳಗಡೆನೇ ಬಾಕಿಯಾಗಿದ್ದು, ಇದನ್ನು ಯಾರೂ ಗಮನಿಸಿರಲಿಲ್ಲ.

ಗ್ರಾ.ಪಂ.ನವರು ಇದಕ್ಕೆ ನೀರು ತುಂಬಿಸಿ ನಟ್ಟಿಬೈಲ್ ಪರಿಸರದ ನಿವಾಸಿಗಳ ಮನೆಗಳಿಗೆ ಸರಬರಾಜು ಮಾಡಲು ಆರಂಭಿಸಿತು. ಸುಮಾರು ಒಂದು ವರ್ಷದಿಂದ ಈ ಪರಿಸರದ ನಾಗರಿಕರು ಇದೇ ನೀರನ್ನು ಕುಡಿಯುತ್ತಿದ್ದರು. ಆದರೆ ಏಕಾಏಕಿ ಟ್ಯಾಂಕ್ ನಿಂದ ಪೈಪ್ಗಳಿಗೆ ನೀರು ಸರಬರಾಜು ಆಗುವುದು ನಿಂತಿತ್ತು. ಜೂ.1ರಂದು ಗ್ರಾ.ಪಂ. ಸಿಬ್ಬಂದಿಯು ಇದನ್ನು ಪರೀಕ್ಷಿಸಲು ಬಂದಿದ್ದು, ಟ್ಯಾಂಕ್ನ ನೀರು ಖಾಲಿ ಮಾಡಿ ಒಳಗಿಳಿದು ನೋಡಿದಾಗ ಅಲ್ಲಿ ಕಸದ ರಾಶಿಯೇ ಪತ್ತೆಯಾಗಿದೆ. ಟ್ಯಾಂಕ್ನೊಳಗಿನ ಅಸಲಿಯತ್ತು ತಿಳಿದು ‘ವ್ಯಾಕ್…. ವ್ಯಾಕ್’ ಎಂದು ವಾಂತಿ ಮಾಡಿಕೊಳ್ಳುವ ಸರದಿ ಈ ನೀರನ್ನು ಒಂದು ವರ್ಷದಿಂದ ಕುಡಿಯುತ್ತಿದ್ದ ಗ್ರಾಹಕರದ್ದಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿ

ದಿನಾಂಕ 7.08.20230 ದಕ್ಷಿಣ ಕನ್ನಡ ಜಿ.ಪಂ.ನ ಕಾರ್ಯ ನಿರ್ವಹಣಾಧಿಕಾರಿ ಜಲಜೀವಿ ಮೆಷಿನ್ ಕಾಮಗಾರಿಯ ಅನುಷ್ಠಾನದ ಕುರಿತು ಗ್ರಾ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ಅದರಲ್ಲಿ ಕುಡಿಯುವ ನೀರಿನ ಟ್ಯಾಂಕ್ಗಳನ್ನು ಮೂರು ತಿಂಗಳಿಗೊಮ್ಮೆ ಶುಚಿಗೊಳಿಸಲು ಸೂಚಿಸಿದ್ದಾರೆ. ಕುಡಿಯುವ ನೀರಿನ ಗುಣಮಟ್ಟದ ಕುರಿತು ಆರೋಪಗಳು ಬಂದಲ್ಲಿ ಸಂಬಂಧಪಟ್ಟ ಪಿಡಿಒ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಲ್ಲಿ ಕಾಮಗಾರಿಯನ್ನು ಗ್ರಾ.ಪಂ.ಗೆ ಬಿಟ್ಟುಕೊಡುವಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಇದನ್ನು ಪರೀಕ್ಷಿಸಿಲ್ಲ. ಇದು ಕಾಮಗಾರಿ ಸಂದರ್ಭ ಬಾಕಿ ಉಳಿದ ಕಸಗಳಾಗಿದೆ. ಗ್ರಾ.ಪಂ.ನವರು ಕೂಡಾ ಟ್ಯಾಂಕ್ ಅನ್ನು ಪರಿಶೀಲಿಸದೇ ನೇರವಾಗಿ ಇದಕ್ಕೆ ನೀರು ತುಂಬಿ ಗ್ರಾಹಕರಿಗೆ ಸರಬರಾಜು ಮಾಡಿದ್ದಾರೆ. ಆದ್ದರಿಂದ ಇಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ರವರ ಹಾಗೂ ಗ್ರಾ.ಪಂ. ಅಧಿಕಾರಿಗಳ ಬೇಜಾವಬ್ದಾರಿ ಎದ್ದು ಕಾಣುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಧನಂಜಯ ನಟ್ಟಿಬೈಲು, ಜಿ.ಪಂ. ಎಂಜಿನಿಯರ್ ಸಂದೀಪ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *