Breaking
7 Jul 2025, Mon

ಪುತ್ತೂರಿನ ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ: ಸುರೇಶ್ ಅತ್ರಮಜಲು ಆರೋಪ

ಪುತ್ತೂರು: ಕಳೆದ ವಾರ ಸುರಿದ ಭಾರೀ ಮಳೆಗೆ ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದಲ್ಲಿ ತೀವ್ರ ತರದ ಭೂಕುಸಿತ ಉಂಟಾಗಿದ್ದು, ಬೆಳ್ಳಿಪ್ಪಾಡಿ ಗ್ರಾಮದಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ನಷ್ಟಕ್ಕೊಳಗಾದ ಮನೆಗಳಿಗೆ ಪರಿಹಾರ ಕೊಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ನಿಷ್ಟ್ರೀಯವಾಗಿದ್ದು, ಕ್ಷೇತ್ರದ ಶಾಸಕರು ಬೆಳ್ಳಿಪ್ಪಾಡಿಗೆ ಬಂದು ಮಾಧ್ಯಮದ ಮುಂದೆ ಪೋಸ್ ಕೊಡುವ ಕೆಲಸ ಮಾಡಿದ್ದಾರೆ ಹೊರತು ಪರಿಹಾರ ಕೊಡಿಸುವ ಕೆಲಸ ಈ ವರೆಗೆ ಮಾಡಿಲ್ಲ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಗ್ರಾಮಗಳ ಪ್ರದೇಶದಲ್ಲಿ ಸುಮಾರು 60 ರಷ್ಟು ಮನೆಗಳ ಮುಂದೆ ಗುಡ್ಡ ಜರಿದು ಬಿದ್ದಿದ್ದು, 12 ಕಡೆಗಳಲ್ಲಿ ರಸ್ತೆ ಬದಿ ದರೆ ಕುಸಿದು ಹಾನಿಯಾಗಿದೆ. ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಅಡಕೆ ಮರಗಳು ಧರಶಾಹಿಯಾಗಿದೆ. 10 ಕಿ.ಮೀ. ಕೃಷಿ ನಾಶವಾಗಿದೆ. ರಸ್ತೆಗಳಿಗೂ ಹಾನಿಯಾಗಿದೆ. ಬಜತ್ತೂರಿನಲ್ಲಿ ಮೂರು ಮನೆಗಳು ಭಾಗಶಃ ಹಾನಿಯಾಗಿದ್ದು, 18 ಮನೆಗಳಿಗೆ ಧರೆ ಕುಸಿದು ಬಿದ್ದಿದೆ. ಒಟ್ಟಾರೆಯಾಗಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದಷ್ಟೇ ಇಲ್ಲಿಯೂ ಆಗಿದ್ದು, ಸುಮಾರು 25 ಕೋಟಿಗೂ ಮಿಕ್ಕಿ ಹಾನಿಯಾಗಿದೆ ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪ ಸಭೆಗಳಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಅಧಿಕಾರಿಗಳು ಎಲರ್ಟ್ ಆಗಿರಬೇಕು ಎಂದು ತಿಳಿಸುತ್ತಾರೆ. ಈ ಕೆಲಸ ನಡೆಯುವುದೇ ಇಲ್ಲ. ಈ ಗ್ರಾಮಗಳಿಗೆ ಸಂಬಂಧಿಸಿದ ತಾಲೂಕಿನ ತಹಸೀಲ್ದಾರರು, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಈ ಭಾಗದ ಪ್ರಾಕೃತಿಕ ವಿಕೋಪದ ಸಮೀಕ್ಷೆಯಾಗಲಿ, ಜನರಿಗೆ ಸಾಂತ್ವನ ಹೇಳು ಕೆಲಸವನ್ನಾಗಲಿ ಇದುವರೆಗೆ ಮಾಡಲಿಲ್ಲ. ಕೇವಲ ಪಂಚಾಯತ್ ಸದಸ್ಯರೇ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಸರಕಾರ ಈ ಭಾಗದ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ತಕ್ಷಣ ಸಂಪೂರ್ಣ ಹಾನಿಗೊಳಗಾದ ಕುಟುಂಬಕ್ಕೆ 10 ಲಕ್ಷ ಪರಿಹಾರ, ಭಾಗಶಃ ಹಾನಿಗೊಳಗಾದ ಮನೆಗಳಿಗೆ ಎರಡು ಲಕ್ಷ ರೂ., ರೈತರಿಗೆ ಎಕ್ರೆಗೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಅಲ್ಲದೆ ಈ ಪಂಚಾಯಿತಿಗಳಿಗೆ ತಲಾ ಒಂದು ಕೋಟಿ ರೂ. ರಸ್ತೆ, ತೋಡು ದುರಸ್ತಿಗೆ ನೀಡಬೇಕು ಎಂದು ಅವರು ಆಗ್ರಹಿಸಿದ್ದು, ಈ ಕುರಿತು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ನೆಕ್ಕಿಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಕೋಡಿಂಬಾಡಿ ಗ್ರಾಪಂ ಸದಸ್ಯ ರಾಮಚಂದ್ರ, ನೆಕ್ಕಿಲಾಡಿ ಗ್ರಾಪಂ ಉಪಾಧ್ಯಕ್ಷ ಹರೀಶ್ ನಾಯ್ಕ್, ಗಂಗಾಧರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *