ನವದೆಹಲಿ: ನೀಟ್-ಯುಜಿ 2026 ಮರುಪರೀಕ್ಷೆಯ ಹಿನ್ನೆಲೆ ಭಾರತದಲ್ಲಿ ಟೆಲಿಗ್ರಾಮ್ ಸೇವೆಗೆ ವಿಧಿಸಲಾಗಿರುವ ತಾತ್ಕಾಲಿಕ ನಿರ್ಬಂಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿದ್ದು, ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವಂಚನೆಗೆ ಸಂಬಂಧಿಸಿದ ಚಟುವಟಿಕೆಗಳು ಟೆಲಿಗ್ರಾಮ್ ಚಾನೆಲ್ಗಳ ಮೂಲಕ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಜೂನ್ 22ರವರೆಗೆ ಟೆಲಿಗ್ರಾಮ್ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಜೊತೆಗೆ, ಭಾರತದಲ್ಲಿ ಟೆಲಿಗ್ರಾಮ್ನ ಸಂದೇಶ ಸಂಪಾದನೆ ಸೌಲಭ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಕ್ರಮವನ್ನು ಸ್ವಾಗತಿಸಿದ್ದು, ನಕಲಿ ಪ್ರಶ್ನೆಪತ್ರಿಕೆಗಳು, ಸುಳ್ಳು ಮಾಹಿತಿ ಹಾಗೂ ಪರೀಕ್ಷಾ ವಂಚನೆಗೆ ಸಂಬಂಧಿಸಿದ ಜಾಲಗಳನ್ನು ನಿಯಂತ್ರಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಹೇಳಿದೆ. ‘Paper Leaked NEET’, ‘Re-NEET 2026’, ‘NEET Mafia’ ಸೇರಿದಂತೆ ಹಲವು ಚಾನೆಲ್ಗಳು ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟೆಲಿಗ್ರಾಮ್ ಸಂಸ್ಥೆ, ಇಂತಹ ವ್ಯಾಪಕ ನಿರ್ಬಂಧವು ಭಾರತದ ಕೋಟ್ಯಂತರ ಬಳಕೆದಾರರಿಗೆ ತೊಂದರೆ ಉಂಟುಮಾಡುತ್ತದೆ ಹಾಗೂ ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವುದಿಲ್ಲ ಎಂದು ವಾದಿಸಿದೆ. ಸಂಸ್ಥಾಪಕ Pavel Durov ಕೂಡ ನಿರ್ಬಂಧವನ್ನು ಟೀಕಿಸಿದ್ದಾರೆ.
ಈಗ ದೆಹಲಿ ಹೈಕೋರ್ಟ್ ನೀಡುವ ತೀರ್ಪಿನತ್ತ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ತಂತ್ರಜ್ಞಾನ ವಲಯದವರ ಗಮನ ನೆಟ್ಟಿದೆ.





