ಕಾಸರಗೋಡು: ‘ಆಪರೇಷನ್ ತೂಫಾನ್’ ವಿಶೇಷ ಕಾರ್ಯಾಚರಣೆಯ ಅಂಗವಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಮಧೂರು ಪಟ್ಲ ಪ್ರದೇಶದಿಂದ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳೊಂದಿಗೆ ಮಧೂರು ಪಟ್ಲ ನಿವಾಸಿ ಕೆ. ಇಬ್ರಾಹಿಂ ಬಾತ್ಷಾ (36) ಅವರನ್ನು ಬಂಧಿಸಲಾಗಿದೆ.

ಪೊಲೀಸರು ನಿಷೇಧಿತ ಪಾನ್ ಮಸಾಲ, ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ ಮಾರಾಟದಿಂದ ಬಂದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಪಟ್ಲ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರು ಪೊಲೀಸರ ಗಮನಕ್ಕೆ ಬಂದಿದ್ದು, ಕಾರಿನ ಗಾಜಿನ ಮೂಲಕ ಪ್ಲಾಸ್ಟಿಕ್ ಚೀಲಗಳು ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ.
ತಪಾಸಣೆ ವೇಳೆ ಕಾರಿನೊಳಗೆ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿದ್ದು, ‘ಆಪರೇಷನ್ ತೂಫಾನ್’ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.







