ಬೆಳ್ತಂಗಡಿ: ತಾಲೂಕಿನ ರೆಖ್ಯಾ ಗ್ರಾಮದ ಕೃಷಿ ಕಾರ್ಮಿಕರಾದ ಬಾಲಕೃಷ್ಣ ಗೌಡ ಅವರು ಆಗಸ್ಟ್ 1ರಂದು ರಾತ್ರಿ ಕಾಡಾನೆ ದಾಳಿಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಆಗಸ್ಟ್ 2ರಂದು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮೃತರ ಕುಟುಂಬಕ್ಕೆ ಸರ್ಕಾರದಿಂದ ಒಟ್ಟು ರೂ.20 ಲಕ್ಷ ಪರಿಹಾರ ಮಂಜೂರು ಮಾಡುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರಥಮ ಹಂತವಾಗಿ ರೂ.5 ಲಕ್ಷ ಪರಿಹಾರ ಧನದ ಚೆಕ್ ಅನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಉಳಿದ ರೂ.15 ಲಕ್ಷವನ್ನು ಮೃತರ ವಾರೀಸುದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ, ಮೃತರ ಕುಟುಂಬಕ್ಕೆ ದೊರೆಯಬೇಕಿರುವ ಎಲ್ಲಾ ಸರ್ಕಾರಿ ನೆರವು ಹಾಗೂ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ರವಿಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸುಬ್ಬಯ್ಯ ನಾಯ್ಕ, ವಲಯ ಅರಣ್ಯಾಧಿಕಾರಿ (RFO), ತಹಶೀಲ್ದಾರ್ ಎಸ್.ಎನ್. ನರಗುಂದ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



