Breaking
19 Sep 2026, Sat

10 ಲಕ್ಷ ದರೋಡೆ ಪ್ರಕರಣ – ಇಬ್ಬರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

ಮಂಗಳೂರು: 2023ರಲ್ಲಿ ನಡೆದ ₹10 ಲಕ್ಷ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಪಿಎಸ್ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯವು ತಲಾ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ನಿವಾಸಿ ರಾಜೀಮ್ ಹಾಗೂ ಕೊಕ್ಕಡ ನಿವಾಸಿ ಮುಸ್ತಫಾ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.

2023ರ ಜೂನ್ 20ರಂದು ಇಳಂತಿಲ ಗ್ರಾಮದ ರಿಫೈನ್ ನಗರದಲ್ಲಿ ಮಹಮ್ಮದ್ ಕೆ. ಅವರು ಪುತ್ರಿಯ ವಿವಾಹಕ್ಕಾಗಿ ಸಾಲ ಪಡೆದು ಸಂಗ್ರಹಿಸಿದ್ದ ₹10 ಲಕ್ಷ ಹಣವನ್ನು ತಮ್ಮ ಸ್ಕೂಟರ್ ಸೀಟಿನಡಿ ಇಡುತ್ತಿದ್ದ ವೇಳೆ, ಹಿಂದಿನಿಂದ ಬಂದ ರಾಜೀಮ್ ಹಣದ ಕಟ್ಟನ್ನು ದರೋಡೆ ಮಾಡಿ, ಬಳಿಕ ಅದನ್ನು ಮುಸ್ತಫಾಗೆ ನೀಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ವೃತ್ತ ನಿರೀಕ್ಷಕ ರವಿ ಬಿ.ಎಸ್. ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮನು ಬಿ.ಕೆ. ಅವರು ಇಬ್ಬರು ಆರೋಪಿಗಳಿಗೆ ತಲಾ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಸರ್ಕಾರದ ಪರ ವಾದ ಮಂಡಿಸಿದರು.

Leave a Reply

Your email address will not be published. Required fields are marked *