ಮಂಗಳೂರು: 2018ರಲ್ಲಿ ಸಂಚಲನ ಮೂಡಿಸಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಾಲ್ವರು ಆರೋಪಿಗಳಿಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹74 ಸಾವಿರ ದಂಡ ವಿಧಿಸಲಾಗಿದೆ.

ಶಿಕ್ಷೆಗೆ ಗುರಿಯಾದವರು ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಮತ್ತು ಅಬ್ದುಲ್ ರಿಯಾಝ್ (40).
ಪ್ರಕರಣದ ಪ್ರಕಾರ, 2018ರ ನವೆಂಬರ್ 18ರಂದು ಯುವತಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ಬೀಚ್ಗೆ ತೆರಳಿದ್ದ ವೇಳೆ, ಮೂವರು ಅಪ್ರಾಪ್ತರು ಸೇರಿದಂತೆ ಏಳು ಮಂದಿ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಬಳಿಕ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಕಲಾವತಿ ಕೆ. ಹಾಗೂ ಎಸಿಪಿ ಮಂಜುನಾಥ್ ಶೆಟ್ಟಿ ನಡೆಸಿದ್ದರು. ನಂತರ ಎಸಿಪಿ ಶ್ರೀನಿವಾಸ ಗೌಡ ಆರ್. ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್ಶೀಟ್) ಸಲ್ಲಿಸಿದ್ದರು.

ವಿಚಾರಣೆ ವೇಳೆ ಸಲ್ಲಿಕೆಯಾಗಿದ್ದ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದರು. ಅದರಂತೆ ನಾಲ್ವರು ವಯಸ್ಕ ಆರೋಪಿಗಳಿಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.
ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತರ ವಿರುದ್ಧದ ವಿಚಾರಣೆ ಬಾಲ ನ್ಯಾಯ ಮಂಡಳಿಯಲ್ಲಿ ಪ್ರತ್ಯೇಕವಾಗಿ ಮುಂದುವರಿಯುತ್ತಿದೆ.


