ಶಿಮ್ಲಾ: ಮಸ್ರುಂದ್–ಹಮಲ್ ರಸ್ತೆಯಲ್ಲಿ ಬೊಲೆರೊ ವಾಹನ ಕಂದಕಕ್ಕೆ ಉರುಳಿದ ಪರಿಣಾಮ ಏಳು ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಬುಧವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರಣ ವಾಹನ ಕಂದಕಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ. ಮೃತರೆಲ್ಲರೂ ಕುತೇಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಲ್ ಗ್ರಾಮದ ನಿವಾಸಿಗಳಾಗಿದ್ದಾರೆ.

ಕಾಕ್ರೋಧಾ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೊಲೆರೊ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಮಹಿಳೆಯರು ಮತ್ತು ಪುರುಷರು ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಜಿಲ್ಲಾಡಳಿತ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ದಟ್ಟ ಕತ್ತಲೆ ಮತ್ತು ಕಡಿದಾದ ಪ್ರದೇಶವಾಗಿದ್ದರಿಂದ ಮೃತದೇಹಗಳನ್ನು ಹೊರತೆಗೆದಲು ಸಾಕಷ್ಟು ಸಮಯ ಹಿಡಿಯಿತು.
ಈ ರಸ್ತೆಯಲ್ಲಿ ಸಮರ್ಪಕ ಸುರಕ್ಷತಾ ತಡೆಗೋಡೆಗಳಿಲ್ಲದಿರುವುದೇ ಅಪಘಾತದ ತೀವ್ರತೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.






