ಬೆಂಗಳೂರು: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬಾಡಿಗೆ ಮನೆಗಳು ಹಾಗೂ ಸ್ಪಾಗಳನ್ನು ಕೇಂದ್ರವಾಗಿಸಿಕೊಂಡು ನಡೆಸಲಾಗುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಜಾಲದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರು ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ಕಾಮಾಕ್ಷಿಪಾಳ್ಯ, ಕೆ.ಆರ್. ಪುರಂ, ಕುಮಾರಸ್ವಾಮಿ ಲೇಔಟ್ ಹಾಗೂ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಗಳಲ್ಲಿ ಈ ದಂಧೆ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ. ಜೊತೆಗೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಸ್ಪಾವೊಂದರಲ್ಲೂ ಇದೇ ಚಟುವಟಿಕೆ ನಡೆಯುತ್ತಿದ್ದುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ಹಠಾತ್ ದಾಳಿ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಅಕ್ರಮ ಚಟುವಟಿಕೆಗೆ ಬಳಸಲಾಗುತ್ತಿದ್ದ ಕೆಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಸ್ತುತ ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.






