Breaking
18 Jun 2026, Thu

ತಾಂತ್ರಿಕ ದೋಷ ಪರಿಶೀಲನೆ ವೇಳೆ ಜೀವ ಕಳೆದುಕೊಂಡ ಟಿಪ್ಪರ್ ಚಾಲಕ

ವಿಟ್ಲ: ತಾಂತ್ರಿಕ ದೋಷ ಸರಿಪಡಿಸುವ ವೇಳೆ ಟಿಪ್ಪರ್ ಲಾರಿ ಏಕಾಏಕಿ ಹಿಂದಕ್ಕೆ ಚಲಿಸಿದ ಪರಿಣಾಮ ಚಾಲಕ ಚಕ್ರದಡಿಗೆ ಸಿಲುಕಿ ಮೃತಪಟ್ಟ ದುರ್ಘಟನೆ ಜೂನ್ 18ರಂದು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಾದೆಕಲ್ಲು ಪೆರುವಡಿ ಗುಡ್ಡದಲ್ಲಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಪೆರುವಡಿ ಸರವು ಗುಡ್ಡದಲ್ಲಿ ಹೊರರಾಜ್ಯಗಳಿಗೆ ಮಣ್ಣು ಸಾಗಾಟ ನಡೆಯುತ್ತಿದ್ದು, ಬೆಳಿಗ್ಗೆ ಸುಮಾರು 10 ಗಂಟೆಗೆ ನಿಷ್ಪ್ರಯೋಜಕ ಮಣ್ಣು ತೆರವುಗೊಳಿಸುವ ಕಾರ್ಯಕ್ಕಾಗಿ ಮಹೇಶ್ ಟಿಪ್ಪರ್ ಲಾರಿಯನ್ನು ಸ್ಥಳಕ್ಕೆ ತಂದಿದ್ದರು.

ಈ ವೇಳೆ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹೇಶ್ ವಾಹನವನ್ನು ನಿಲ್ಲಿಸಿ ಅದರ ಕೆಳಗೆ ಹೋಗಿ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಅದೇ ಸಮಯದಲ್ಲಿ ಲಾರಿ ಏಕಾಏಕಿ ಹಿಂದಕ್ಕೆ ಚಲಿಸಿದ್ದು, ಮಹೇಶ್ ಮುಂದಿನ ಚಕ್ರದಡಿಗೆ ಸಿಲುಕಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಘಟನೆಯ ಬಳಿಕ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಲಾರಿಯಡಿಯಿಂದ ಹೊರತೆಗೆದು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *