Breaking
18 Jun 2026, Thu

ಮರಳು ಗಣಿಗಾರಿಕೆ ವಿವಾದ : ಬಿಜೆಪಿ ನಾಯಕ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟು ಹತ್ಯೆ

ಛತ್ತೀಸ್ಗಢ: ಛತ್ತೀಸ್ಗಢದ ಕೊರಿಯಾ ಜಿಲ್ಲೆ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ವಿವಾದ ಭೀಕರ ಹತ್ಯಾಕಾಂಡಕ್ಕೆ ತಿರುಗಿದೆ. ಬಿಜೆಪಿ ನಾಯಕ ಹಾಗೂ ಜನಪದ್ ಪಂಚಾಯತ್ ಮಾಜಿ ಅಧ್ಯಕ್ಷ ಭರತ್ ಸಿಂಗ್ ಸೇರಿದಂತೆ ಮೂವರು ಸಜೀವ ದಹನಗೊಂಡು ಮೃತಪಟ್ಟ ಘಟನೆ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳವಾರ ತಡರಾತ್ರಿ ನೌಗೈನ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮರಳು ಕ್ವಾರಿ ವ್ಯವಹಾರ ಮತ್ತು ಸಾಗಣೆ ನಿಯಂತ್ರಣದ ವಿಚಾರದಲ್ಲಿ ಹಲವು ತಿಂಗಳುಗಳಿಂದ ಎರಡು ಬಣಗಳ ನಡುವೆ ಗಂಭೀರ ವಿವಾದ ನಡೆಯುತ್ತಿತ್ತು.

ಘಟನೆಯ ದಿನ ರಾತ್ರಿ ವಿವಾದ ಬಗೆಹರಿಸಲು ಭರತ್ ಸಿಂಗ್ ತಮ್ಮ ಸಹಚರರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಇದೇ ವೇಳೆ ಅವರ ಫಾರ್ಚೂನರ್ ಕಾರನ್ನು ಟ್ರಕ್ಗಳ ಮೂಲಕ ಸುತ್ತುವರಿದು ತಪ್ಪಿಸಿಕೊಳ್ಳಲು ಅವಕಾಶ ನೀಡದೇ ದಾಳಿ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ದಾಳಿಕೋರರು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ, ಕಾರಿನೊಳಗಿದ್ದ ಭರತ್ ಸಿಂಗ್ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಘಟನೆಯಲ್ಲಿ ಅವರ ಸಂಬಂಧಿ ನಾಗೇಂದ್ರ ಸಿಂಗ್ ಮತ್ತು ವೀರೇಂದ್ರ ಸಿಂಗ್ ಕೂಡ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಮಯಾಂಕ್ ಸಿಂಗ್ ಅವರನ್ನು ಬಿಲಾಸ್ಪುರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಪ್ರಕರಣ ಸಂಬಂಧ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಹಾಗೂ ಮನ್ನು ತ್ರಿಪಾಠಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಒಂಬತ್ತು ಮಂದಿಯ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.

ಇದು ಪೂರ್ವನಿಯೋಜಿತ ಸಂಚು ಎಂದು ಆರೋಪಿಸಿರುವ ಮೃತ ಭರತ್ ಸಿಂಗ್ ಕುಟುಂಬ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದೆ.

ಘಟನೆಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಪ್ರತಿಕ್ರಿಯಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *