ಕುಂದಾಪುರ: ಬಾವಿಗೆ ರಿಂಗ್ ಹಾಕುತ್ತಿದ್ದ ಕಾರ್ಮಿಕನೋರ್ವ ಆಯತಪ್ಪಿ 50 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಮೂಡುಗೋಪಾಡಿ ಎಂಬಲ್ಲಿ ಮೇ29ರಂದು ಬೆಳಗ್ಗೆ ನಡೆದಿದೆ.

ಸುಬಾಷ್ ಪೂಜಾರಿ (50 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಕಾರ್ಯಾಚರಣೆ ನಡೆಸಿ ಬಾವಿಯ ಕೆಸರಿನೊಳಗೆ ಹುದುಗಿದ್ದ ಸುಬಾಷ್ ಪೂಜಾರಿಯವರ ಮೃತದೇಹವನ್ನು ಹೊರಕ್ಕೆ ತೆಗೆದು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಈ ವೇಳೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಪಡೆಯ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕಾರ್ಯಾಚರಣೆಯಲ್ಲಿ ಕುಂದಾಪುರದ ಅಗ್ನಿಶಾಮಕ ಪಡೆಯ ಸಿಬ್ಬಂದಿಗಳಾದ ವಿ ಸುಂದರ್, ಸುಂದರ್ ಬಿ, ಖಾಜಾ ಹುಸೇನ್, ಸಚಿನ್, ದೀಪಕ್, ಸಮೀರ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


