Breaking
22 Mar 2026, Sun

ಪ್ರಿಯಕರನೊಂದಿಗೆ ವಿವಾಹಿತೆಯ ಶವ ಬಾವಿಯಲ್ಲಿ ಪತ್ತೆ: ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದ ಪುಟ್ಟ ಬಾಲಕನ ಸಾಕ್ಷಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ, ಮನೆಯ ಸಮೀಪದ ಬಾವಿಯಲ್ಲಿ ಪ್ರಿಯಕರನೊಂದಿಗೆ ವಿವಾಹಿತೆಯ ಶವ ಪತ್ತೆಯಾಗಿದೆ.

ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರ ಎನ್ನಲಾದ ವ್ಯಕ್ತಿಯ ಮೃತದೇಹಗಳು ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಆತ್ಮಹತ್ಯೆಯೋ ಅಥವಾ ಕೊಲೆಯ ನಂತರದ ಆತ್ಮಹತ್ಯೆಯೋ ಎಂಬ ಸಂಶಯ ದಟ್ಟವಾಗಿದೆ.

ಮೃತರನ್ನು ಬಡಗಮಿಜಾರು ನಿವಾಸಿ ನಮೀಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರಿಯಕರನೆಂದು ಹೇಳಲಾಗುತ್ತಿರುವ ನಿಡ್ಡೋಡಿಯ ಪ್ರಶಾಂತ್ ಎಂದು ಗುರುತಿಸಲಾಗಿದೆ.

ನಮೀಕ್ಷಾ ಅವರಿಗೆ ಈ ಹಿಂದೆಯೇ ವಿವಾಹವಾಗಿದ್ದು, ಇಬ್ಬರು ಚಿಕ್ಕ ಗಂಡು ಮಕ್ಕಳಿದ್ದಾರೆ. ಅವರ ಪತಿ ಸತೀಶ್ ಪೂನಾದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದುಬಂದಿದೆ.


ನಮೀಕ್ಷಾ ಮತ್ತು ಪತಿ ಸತೀಶ್ ನಡುವೆ ಕೌಟುಂಬಿಕ ಜೀವನ ಸರಿ ಇರಲಿಲ್ಲ. ಈ ಕಾರಣದಿಂದ ನಮೀಕ್ಷಾ ತನ್ನ ಇಬ್ಬರು ಮಕ್ಕಳೊಂದಿಗೆ ತಂದೆಯ ಮನೆಯಾದ ಬಡಗಮಿಜಾರಿನಲ್ಲಿ ವಾಸವಾಗಿದ್ದರು.

ಇದೇ ವೇಳೆ, ಮೂಲತಃ ಬಾಗಲಕೋಟೆಯವನಾದ, ಈ ಹಿಂದೆ ವಿವಾಹವಾಗಿ ವಿಚ್ಛೇದನ ಪಡೆದಿದ್ದ ಪ್ರಶಾಂತ್‌ನೊಂದಿಗೆ ನಮೀಕ್ಷಾಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಪ್ರಶಾಂತ್ ಆಗಾಗ ನಮೀಕ್ಷಾಳ ತಂದೆಯ ಮನೆಗೆ ಬಂದು ಹೋಗುತ್ತಿದ್ದನೆಂದು ತಿಳಿದುಬಂದಿದೆ.

ಘಟನೆಯ ವಿವರ:
ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಂದರ್ಭದಲ್ಲಿ ಪ್ರಶಾಂತ್, ನಮೀಕ್ಷಾಳ ಮನೆಗೆ ಬಂದಿದ್ದ. ಈ ವೇಳೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಪ್ರಶಾಂತ್ ನಮೀಕ್ಷಾಳನ್ನು ಪಕ್ಕದಲ್ಲಿದ್ದ ಬಾವಿಗೆ ದೂಡಿದ್ದಾನೆ ಎಂದು ಆಕೆಯ ಕಣ್ಣೆದುರೇ ಇದ್ದ ಪುಟ್ಟ ಮಗನೊಬ್ಬ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ತಾಯಿಯನ್ನು ಪ್ರಶಾಂತ್‌ ಬಾವಿಗೆ ದೂಡಿದ್ದು, , ಇದನ್ನು ಮಗು ನೋಡಿದ್ದರಿಂದ ಬೆಚ್ಚಿಬಿದ್ದ ಆತ ತಾನೂ ಅದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಗು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿ ಬಾವಿಯಿಂದ ಇಬ್ಬರ ಮೃತದೇಹಗಳನ್ನು ಮೇಲೆತ್ತಿದ್ದಾರೆ.

ನಮೀಕ್ಷಾಳ ಮಗನ ಹೇಳಿಕೆ ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಿಸಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಮತ್ತು ನಂತರದ ಆತ್ಮಹತ್ಯೆ ಇರಬಹುದೆಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *