ಹಠಾತ್‌ ಏರಿಕೆಯಾದ ನದಿ ನೀರಿನ ಮಟ್ಟ: ಅಪಾಯದಲ್ಲಿದ್ದ 5 ಮಕ್ಕಳ ರಕ್ಷಣೆ

ಮೂಡುಬಿದಿರೆ : ನದಿಯ ತೀರಕ್ಕೆ ಆಟವಾಡಲೆಂದು ತೆರಳಿದ ವೇಳೆ ನೀರಿನ ಮಟ್ಟ ಹಠಾತ್‌ ಏರಿಕೆಯಾಗಿ ಅಪಾಯಕ್ಕೆ ಸಿಲುಕಿದ ಐದು ಮಂದಿ ಮಕ್ಕಳನ್ನು ಪಂಚಾಯತ್‌ ಸದಸ್ಯ ಮತ್ತು ಅವರ ಸ್ನೇಹಿತರು ಸುರಕ್ಷಿತವಾಗಿ ದಡ ಸೇರಿಸಿದ ಘಟನೆ ಇರುವೈಲಿನಲ್ಲಿ ನಡೆದಿದೆ.

ಇರುವೈಲಿನ ಮೂವರು ಬಾಲಕರು ಮತ್ತು ಇಬ್ಬರು ಬಾಲಕಿಯರು ದೊಡ್ಡಳಿಕೆ ಎಂಬಲ್ಲಿ ಫ‌ಲ್ಗುಣಿ ನದಿಯ ಮಧ್ಯೆ ಇರುವ ಕುದ್ರು ಪ್ರದೇಶಕ್ಕೆ ಸಂಜೆ ವೇಳೆಗೆ ಆಟವಾಡಲು ತೆರಳಿದ್ದು, ಮಕ್ಕಳು ಅಲ್ಲಿಗೆ ಹೋಗುವಾಗ ನದಿಯಲ್ಲಿ ನೀರು ಕಡಿಮೆ ಇತ್ತು. ಈ ವೇಳೆ ಮಕ್ಕಳು ಅಲ್ಲಿಗೆ ಹೋಗುವುದನ್ನು ಸ್ಥಳೀಯ ಪಂಚಾಯತ್‌ ಸದಸ್ಯ ನಿತೇಶ್‌ ಕುಮಾರ್‌ ಗಮನಿಸಿದ್ದರು.

ಸ್ವಲ್ಪ ಹೊತ್ತಿನಲ್ಲಿ ಪುಚ್ಚೆಮೊಗರಿನಲ್ಲಿರುವ ವಿದ್ಯುತ್‌ ಉತ್ಪಾದನ ಘಟಕದ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು ಅದರ ಜತೆಗೆ ಮಳೆ ನೀರು ಕೂಡ ಹರಿದುಬಂದ ಪರಿಣಾಮ ನದಿಯ ನೀರಿನ ಮಟ್ಟ ನಿಧಾನಗತಿಯಲ್ಲಿ ಏರಿಕೆ ಕಂಡಿತ್ತು. ಸಂಜೆ ನಿತೇಶ್‌ ಕುಮಾರ್‌ ಅವರು ನದಿಯ ಬಳಿ ತೆರಳಿದಾಗ ನೀರಿನ ಮಟ್ಟ ಏರಿರುವುದನ್ನು ಗಮನಿಸಿದ್ದು, ಮಕ್ಕಳು ಅಪಾಯದಲ್ಲಿ ಇರುವುದನ್ನು ಅರಿತು, ಸ್ಥಳೀಯ ರಿಕ್ಷಾ ಚಾಲಕ ಶೇಖರ್‌ ಮತ್ತು ಈಜು ಬಲ್ಲ ದೀಕ್ಷಿತ್‌ ಎರ್ಮಳ ಎಂಬವರ ಜತೆ ಕುದ್ರುವಿಗೆ ತೆರಳಿ ಅಲ್ಲಿ ಆಟವಾಡುತ್ತಿದ್ದ ಬಾಲಕ -ಬಾಲಕಿಯರನ್ನು ಸೆಳೆತವಿದ್ದ ನದಿಯಲ್ಲಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡಂತೆ ಸುರಕ್ಷಿತವಾಗಿ ದಡಕ್ಕೆ ಸೇರಿಸಿದ್ದು, ನಿತೇಶ್‌ ಕುಮಾರ್‌ ಮತ್ತು ಅವರ ಸ್ನೇಹಿತರ ಸಮಯಪ್ರಜ್ಞೆಯಿಂದ ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದಾರೆ.

Leave a Reply

Your email address will not be published. Required fields are marked *