Breaking
22 Mar 2026, Sun

ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿ ಚೊಟ್ಟೆ ನೌಷಾದ್ ಮೇಲೆ ಸಹ ಕೈದಿಗಳಿಂದ ಹಲ್ಲೆ

ಮಂಗಳೂರು: ನಗರದ ಸೆಂಟ್ರಲ್ ಜೈಲಿನಲ್ಲಿರುವ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿ ಚೊಟ್ಟೆ ನೌಷಾದ್ ಮೇಲೆ ಬಿ ಬ್ಯಾರಕ್ನ ಹಲವು ಸಹ ಕೈದಿಗಳು ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ಅಟ್ಯಾಕ್ ಮಾಡಿದ್ದಾರೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ನೌಷಾದ್ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ನೌಷಾದ್ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾಗಿತ್ತು. ಹಾಗಾಗಿ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮೈಸೂರು ಕಾರಾಗೃಹಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ನೌಷಾದ್, ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದಿದ್ದ.

ಹಾಗಾಗಿ ಜೈಲಿನಲ್ಲಿ ಮತ್ತೋರ್ವ ಕೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಬಂದಿದ್ದರು. ಈ ವೇಳೆ ಇದ್ದಕಿದ್ದಂತೆ ನೌಷಾದ್ ಮೇಲೆ ಸಹ ಕೈದಿಗಳು ಅಟ್ಯಾಕ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಪೈಕಿ ಆರೋಪಿ ನೌಷಾದ್ ಒಬ್ಬನಾಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದರು. ನೌಷದ್ ಉಳಿದ ಆರೋಪಿಗಳೊಂದಿಗೆ ಸೇರಿ ಸುಹಾಸ್ ಶೆಟ್ಟಿ ಕೊಲೆಗೆ ಸಂಚು ರೂಪಿಸಿದ್ದ ಎಂಬುದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿತ್ತು.

ಸುಹಾಸ್ ಶೆಟ್ಟಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ 8 ಆರೋಪಿಗಳನ್ನ ಬಂಧಿಸಲಾಗಿತ್ತು. ಒಟ್ಟು 10 ಆರೋಪಿಗಳು ಭಾಗಿಯಾಗಿದ್ದು, ಇಬ್ಬರು ತಪ್ಪಿಸಿಕೊಂಡಿದ್ದಾರೆ ಅಂತಾ ಪೊಲೀಸರು ಹೇಳಿದ್ದರು. ಆದರೆ ಹತ್ತಲ್ಲ 20ಕ್ಕೂ ಹೆಚ್ಚು ಆರೋಪಿಗಳು ಕೃತ್ಯದಲ್ಲಿ ಭಾಗಿ ಆಗಿರೋ ಶಂಕೆ ಇದೆ. ಬಂಧಿತ 8 ಆರೋಪಿಗಳನ್ನ ಮೇ 9 ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳೂರಿನ 6ನೇ ಜೆಎಂಎಫ್ಸಿ ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.

ಆರೋಪಿ ನೌಷದ್ ಅಲಿಯಾಸ್ ವಾಮಂಜೂರು ನೌಷದ್ ಅಲಿಯಾಸ್ ಚೊಟ್ಟೆ ನೌಷದ್, ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ. ಇತನ ವಿರುದ್ಧ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *