ಬೆಳ್ತಂಗಡಿ: ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಕಾಲೇಜು ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಘಟನೆಯ ಬಗ್ಗೆ ಅನೇಕ ಗೊಂದಲ ಮುಂದುವರಿದಿದ್ದು ಮನೆಯವರನ್ನು ವಂಚಿಸುವ ಪ್ರಯತ್ನ ಸ್ಥಳೀಯ ಪೊಲೀಸರಿಂದ ನಡೆಯುತ್ತಿದೆ ಎಂದು ಮೃತ ಆಕಾಂಕ್ಷಳ ತಂದೆ ಸುರೇಂದ್ರನ್ ಆರೋಪಿಸಿದ್ದಾರೆ.
ಆಕಾಂಕ್ಷ ಸಾವನ್ನಪ್ಪಿದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಮನೆಯವರು ಪೊಲೀಸರಿಗೆ ದೂರು ನೀಡಿ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನವಿದ್ದು ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಕೋರಿದ್ದರು.ತನಿಖೆ ನಡೆಸಿದ ಪೊಲೀಸರು ಸೋಮವಾರ ಮೃತ ಆಕಾಂಕ್ಷಲ ತಂದೆ ಸುರೇಂದ್ರನ್ ಅವರ ಕೈಗೆ ಸ್ಥಳೀಯ ಪೊಲೀಸರು ಎಫ್.ಐ.ಆರ್ ಪ್ರತಿಯನ್ನು ನೀಡಿದ್ದು ಅದು ಪಂಜಾಬಿ ಭಾಷೆಯಲ್ಲಿದ್ದು ಅದರಲ್ಲಿ ತನ್ನ ಮಗಳ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಖಿನ್ನತೆಗೆ ಒಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ತಪ್ಪು ಮಾಹಿತಿ ದಾಖಲಿಸಿರುವುದು ತಿಳಿದು ಬಂದಿದೆ.ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮನೆಯವರು ನಾವು ನೀಡಿರುವ ದೂರಿನಂತೆಯೇ ಪ್ರಕರಣ ದಾಖಲಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾಗ ಪೊಲೀಸರು ಮೃತಳ ತಂದೆ ಸುರೇಂದ್ರ ಅವರಿಂದ ಮತ್ತೊಂದು ದೂರನ್ನು ಪಡೆದುಕೊಂಡಿದ್ದಾರೆ.
ಈ ದೂರಿನಲ್ಲಿ ತಮಗೆ ಮಗಳ ಸಾವಿಗೆ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿರುವ ಮ್ಯಾಥ್ಯೂ ಕಾರಣನಾಗಿದ್ದಾನೆ ಎಂದು ತಿಳಿಸಿದ್ದಾರೆ. ಆಕೆಯ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಇದೀಗ ಆಕಾಂಕ್ಷ ತಂದೆಯ ಹೇಳಿಕೆಯಂತೆ ಕಾಲೇಜಿನ ಸಿ.ಸಿ ಕ್ಯಾಮರಾ ಪುಟೇಜ್ ಗಳನ್ನು ಸರಿಯಾಗಿ ನೀಡುತ್ತಿಲ್ಲ. ಕೇವಲ ಆಕೆ ಕೆಳಗೆ ಬೀಳುವ ದೃಶ್ಯಗಳನ್ನು ಮಾತ್ರ ತೋರಿಸಲಾಗುತ್ತಿದೆ. ಆಕೆ ಹೇಗೆ ಕೆಳಗೆ ಬಿದ್ದಳು ಯಾರಾದರೂ ದೂಡಿರುವುದಾ ಅಥವಾ ಆಕೆ ಹಾರಿರುವುದಾ ಎಂದು ಎಲ್ಲಿಯೂ ಕಾಣಿಸುತ್ತಿಲ್ಲ. ಸಿ.ಸಿ.ಕ್ಯಾಮರದ ಪೂರ್ಣ ದಾಖಲೆಗಳನ್ನು ತೋರಿಸುವಂತೆ ಕೇಳಿದರೆ ಅದನ್ನು ನೀಡಲು ಸಿದ್ದರಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ ತನಿಖೆಯ ಭರವಸೆ ನೀಡಿದ್ದ ಪೊಲೀಸರು ಇದೀಗ ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಿದ್ದಾರೆ.ಪ್ರಕರಣ ದಾಖಲಿಸುವ ಬಗ್ಗೆ ಇರುವ ಗೊಂದಲದಿಂದಾಗಿ ಇನ್ನೂ ಮರಣೋತ್ತರ ಪರೀಕ್ಷೆ ನಡೆದಿಲ್ಲ ಎಂದು ತಿಳಿದು ಬಂದಿದೆ.




