Breaking
20 Jun 2026, Sat

ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರ: ಕೊರಗ ಸಂಘಟನೆಗಳಿಂದ ಪ್ರತಿಭಟನೆಗೆ ಎಚ್ಚರಿಕೆ

ಉಡುಪಿ: ರಾಜ್ಯ ಸರಕಾರ ಕಳೆದ ಎರಡು ತಿಂಗಳಿಂದ ಕೊರಗ ಸಮುದಾಯದವರಿಗೆ ಪೂರೈಕೆ ಮಾಡುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟ ತೀರಾ ಕಳಪೆಯಾಗಿದ್ದು, ಇದರಿಂದ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
ಈ ಬಗ್ಗೆ ಗಮನಹರಿಸಿ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಇಲ್ಲದಿದ್ದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೊರಗ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಪ್ರಿಮಿಟಿವ್ ಟ್ರೈಬ್ ಸಮುದಾಯವಾದ ಕೊರಗರು ರಕ್ತಹೀನತೆ , ಟಿಬಿ, ಅಪೌಷ್ಟಿಕತೆ ಇಂತಹ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಮನಗೊಂಡು ಸರ್ಕಾರವು ಅನೇಕ ವರುಷಗಳಿಂದ ಕೊರಗ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಪೂರೈಕೆಯನ್ನು ಮಾಡುತ್ತಿವೆ.

ಆದರೆ ಇತ್ತೀಚೆಗೆ ಕಳೆದ ಎರಡು ತಿಂಗಳಿಂದ ಪೂರೈಕೆ ಯಾಗುತ್ತಿರುವ ಪೌಷ್ಟಿಕ ಆಹಾರವಾದ ತುಪ್ಪ, ಎಣ್ಣೆ, ಕಡಲೆ, ತೊಗರಿ ಬೇಳೆ, ಸಕ್ಕರೆ, ಬೆಲ್ಲ, ಹೆಸರುಕಾಳು, ತೊಗರಿ, ಅಕ್ಕಿ, ಪಾಮೋಲಿನ್ ಎಣ್ಣೆ, ಮತ್ತು ಮೊಟ್ಟೆ ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳು ತುಂಬಾ ಕಳಪೆಯಾಗಿದ್ದು ಅದನ್ನು ಸೇವಿಸಲು ಅಸಾಧ್ಯವಾಗಿದ್ದು, ಕೊರಗರಿಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.

ಈ ಕುರಿತು ಸಮಗ್ರ ಬುಡಕಟ್ಟು ಯೋಜನಾ ಇಲಾಖೆಗೆ ಮನವಿ ಸಲ್ಲಿಸಿದ್ದು ಕೊರಗರ ಪ್ರಮುಖ ಬೇಡಿಕೆಗೆ ಯಾವುದೇ ರೀತಿಯಿಂದಲೂ ಸ್ಪಂದಿಸುತ್ತಿಲ್ಲ. ಅಲ್ಲದೇ ಉಡುಪಿ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಿದ್ದಾರೆ.

ಸರ್ಕಾರವು ಕೂಡಲೇ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸಲು ಗಮನಕೊಡಬೇಕು ಹಾಗೂ ತ್ವರಿತವಾಗಿ ಕೊರಗರ ಗಂಭೀರ ಸಮಸ್ಯೆಗೆ ಸ್ಪಂದಿಸದಿದ್ದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯೆದುರು ಕೊರಗ ಸಂಘಗಳ ಒಕ್ಕೂಟದಿಂದ ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ಮತ್ತು ಸಂಯೋಜಕರಾದ ಪುತ್ರನ್ ಹೆಬ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *