Breaking
21 Jun 2026, Sun

ಆಪರೇಷನ್ ಸಿಂಧೂರ್‌ಗೆ ಧಿಕ್ಕಾರ ಎಂದು ಪೋಸ್ಟ್ ಮಾಡಿದ ಬೆಳ್ತಂಗಡಿ ಯುವತಿ

ಬೆಳ್ತಂಗಡಿ: ಒಂದು ಕಡೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಆಪರೇಷನ್ ಸಿಂಧೂರ್ ಮೂಲಕ ಈಗಾಗಲೇ ಭಾರತೀಯ ಸೇನೆ ದಿಟ್ಟ ಉತ್ತರ ಕೊಟ್ಟಿದೆ.

ಇನ್ನೊಂದು ಕಡೆ ಮತ್ತೆ ಉದ್ಧಟತನ ಮೆರೆದ ಪಾಪಿ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್- 2ವನ್ನು ಮತ್ತೆ ಮುಂದುವರೆಸುವುದರ ಮೂಲಕ ನಮ್ಮ ಸಹನೆಯ ಎಲ್ಲೆ ಮೀರಿದೆ.ಯದ್ಧದ ಮೂಲಕವೇ ನಿಮಗೆ ತಕ್ಕ ಉತ್ತರ ಕೊಡುತ್ತೇವೆ ಅಂತ ಭಾರತ ಹೇಳಿದೆ.ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ಧಿಕ್ಕಾರ ಆಪರೇಷನ್ ಸಿಂಧೂರ್ ” ಎಂದು ಮೇ 08 ದಂದು ಪೋಸ್ಟ್ ಹಾಕಿದ್ದರು.

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿರುವ ರೇಷ್ಮಾ “ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು” “ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತಲು… ಎಲ್ಲೆಲ್ಲೂ ಕತ್ತಲು…!” ಹ್ಯಾಷ್ ಟ್ಯಾಗ್ ನಡಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೇಷ್ಮಾ ಅವರು ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಇತ್ತ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ವಿದ್ಯಾರ್ಥಿನಿ ರೇಷ್ಮಾ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾರೆ. “ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.

ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ, ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ” ಎಂದು ರೇಷ್ಮಾ ಹೊಸದಾಗಿ ಪೋಸ್ಟ್ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ರೇಷ್ಮಾ ಇನ್ಸಾಗ್ರಾಂ ಅಕೌಂಟ್ ಅನ್ನು ರಿಪೋರ್ಟ್ ಮಾಡುವಂತೆ ಮತ್ತು ಪ್ರಕರಣ ದಾಖಲಿಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.

Leave a Reply

Your email address will not be published. Required fields are marked *