ಮಂಗಳೂರು: ಮಗುವಿನ ನಾಮಕರಣಕ್ಕೆ ಚಿನ್ನಾಭರಣ ಖರೀದಿಸುವಂತೆ ನಟಿಸಿ ಮಹಿಳೆಯೊಬ್ಬರು ಅಂಗಡಿ ಮಾಲೀಕರಿಗೆ ಹಣ ನೀಡದೆ ವಂಚಿಸಿದ್ದು ಈ ಕುರಿತು ಅಂಗಡಿ ಮಾಲೀಕ ಕಾವೂರು ಠಾಣೆಗೆ ದೂರು ನೀಡಿದ್ದಾರೆ.
ಫರೀದಾ ಎಂಬ ಮಹಿಳೆ ಮಾ.25 ರಂದು ಅಂಗಡಿ ಮಾಲೀಕರಿಗೆ ಕರೆ ಮಾಡಿ ತಾನು ಕುಂಜತ್‌ಬೈಲ್‌ನವಳಾಗಿದ್ದು ಮಗುವಿನ ನಾಮಕರಣಕ್ಕೆ ಚಿನ್ನದ ಒಂದು ಬ್ರಾಸ್‌ಲೆಟ್, ಒಂದು ಚೈನ್, ಎರಡು ಉಂಗುರ ಬೇಕಾಗಿದೆ. ಡಿಸೈನ್‌ನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ. ನಾನು ಸೆಲೆಕ್ಟ್ ಮಾಡಿ ನಿಮಗೆ ಹಣವನ್ನು ನೆಫ್ಟ್ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಅಂಗಡಿ ಮಾಲೀಕ ಡಿಸೈನ್‌ಗಳ ಫೋಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದರು. ಬಳಿಕ ಮಹಿಳೆ ‘ಒಂದು ಚೈನ್, ಒಂದು ಬ್ರಾಸ್‌ಲೆಟ್ ಮತ್ತು ಎರಡು ಉಂಗುರಗಳನ್ನು ಆಯ್ಕೆ ಮಾಡಿ ಮರುದಿನ ಕರೆ ಮಾಡಿ, ಹಣವನ್ನು ನೆಫ್ಟ್ ಮೂಲಕ ಕಳುಹಿಸುತ್ತೇನೆ. ಆಯ್ಕೆ ಮಾಡಿದ ಚಿನ್ನವನ್ನು ಹಿಯಾಝ್ ಕೆ.ಎಸ್. ಎಂಬ ಹುಡುಗನಲ್ಲಿ ಕಳುಹಿಸಿಕೊಡಿ’ ಎಂದಿದ್ದರು.

ಹಿಯಾಝ್ ಎಂಬಾತನನ್ನು ಮಹಿಳೆ ಚಿನ್ನದ ಮಳಿಗೆಗೆ ಕಳುಹಿಸಿಕೊಟ್ಟು ಬ್ಯಾಂಕ್‌ನ 1.36ಲಕ್ಷ.ರೂ. ಮೊತ್ತದ ಡಿಪಾಸಿಟ್ ಪೇ ಸ್ಲಿಪ್‌ನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದರು. ಆದರೆ ಹಣ ಅಂಗಡಿ ಮಾಲಕರ ಖಾತೆಗೆ ಜಮೆಯಾಗಿರಲಿಲ್ಲ. ಈ ಬಗ್ಗೆ ಮಾಲಕರು ತಿಳಿಸಿದಾಗ ಫರೀದಾ ‘ಸರ್ವರ್ ಸ್ಲೋ ಇದೆ. 30 ನಿಮಿಷದಲ್ಲಿ ನಿಮಗೆ ಜಮೆಯಾಗುತ್ತದೆ. ಹುಡುಗನಲ್ಲಿ ಚಿನ್ನವನ್ನು ಕೊಡಿ’ ಎಂದು ತಿಳಿಸಿದಳು. ಇದನ್ನು ನಂಬಿದ ತಾನು ಚಿನ್ನಾಭರಣಗಳನ್ನು ಕಳುಹಿಸಿಕೊಟ್ಟಿದ್ದರು.

ಅದೇ ದಿನ ಸಂಜೆಯ ತನಕ ಹಣ ಜಮೆಯಾಗುವುದಕ್ಕಾಗಿ ಕಾದ ಮಾಲಕ ಮತ್ತೆ ಫರೀದಾಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ತಿಳಿಸಿದ್ದಾರೆ. ಆಗ ಕೂಡ ಸರ್ವರ್ ಸಮಸ್ಯೆ ಇರಬಹುದು. ನಾಳೆ ಅಂಗಡಿಗೆ ಬಂದು ಹಣವನ್ನು ನೀಡುತ್ತೇನೆಂದು ಫರೀದಾ ಉತ್ತರಿಸಿದ್ದರು. ಮರುದಿನ ಮಾಲಕ ಹಣ ಕೇಳಿದಾಗ ನಿಮಗೇನು ಅವಸರ, ಹಣ ಕೊಡುತ್ತೇನೆ ಎಂದಿದ್ದರಂತೆ. ಅಲ್ಲದೆ ಪದೇ ಪದೇ ಕರೆ ಮಾಡಿ ಬರಬೇಕಾದ ಹಣವನ್ನು ಕೇಳಿದಾಗ ಮಹಿಳೆ ಹಣವನ್ನು ನೀಡದೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


