Breaking
11 Aug 2026, Tue

ತಂಗಿಯ ಆತ್ಮಹತ್ಯೆ ಬೆನ್ನಲ್ಲೇ ಸಹೋದರನೂ ಲಾಡ್ಜ್‌ ನಲ್ಲಿ ಶವವಾಗಿ ಪತ್ತೆ

ಮಂಗಳೂರು: ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೋಚಿಂಗ್ ಸೆಂಟರ್ನ ಹಾಸ್ಟೆಲ್ನಲ್ಲಿ ತಂಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಗಲ್ಫ್ನಿಂದ ಮಂಗಳೂರಿಗೆ ವಾಪಸಾಗಿದ್ದ ಆಕೆಯ ಸಹೋದರ ಲಾಡ್ಜ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.


ಮೃತರನ್ನು ಕೇರಳದ ಬೇಕಲ್ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಎಂದು ಗುರುತಿಸಲಾಗಿದೆ.


ಅರ್ಜುನ್ ಅವರ ತಂಗಿ ಐಜಾ ಆರ್. ಮಹೇಶ್ ಕಳೆದ ಜೂನ್ನಲ್ಲಿ ತರಬೇತಿ ಕೇಂದ್ರದ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಗೊಂದಲದ ಬಳಿಕ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಐಜಾ, ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು.


ತಂಗಿಯ ಸಾವಿನ ಸುದ್ದಿ ತಿಳಿದು ಗಲ್ಫ್ನಿಂದ ಊರಿಗೆ ಆಗಮಿಸಿದ್ದ ಅರ್ಜುನ್ ಬಳಿಕ ಉದ್ಯೋಗಕ್ಕಾಗಿ ಮತ್ತೆ ಗಲ್ಫ್ಗೆ ತೆರಳಿದ್ದರು. ಭಾನುವಾರ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಅವರು, ಮನೆಗೆ ವಾಪಸಾಗುತ್ತಿರುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಇದೇ ವೇಳೆ ಭಾನುವಾರ ಮಧ್ಯಾಹ್ನ ತಾಯಿಯೊಂದಿಗೂ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ.


ಆದರೆ ಬಳಿಕ ಅರ್ಜುನ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಮಂಗಳೂರಿಗೆ ಆಗಮಿಸಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆಯಲಿಲ್ಲ.


ಈ ನಡುವೆ ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಪ್ರದೇಶದಲ್ಲಿರುವ ಲಾಡ್ಜ್ನ ಕೋಣೆಯೊಂದರಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.


ಮಾಹಿತಿ ಪಡೆದ ಬಜ್ಪೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅರ್ಜುನ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಬಜ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಒಂದೇ ಕುಟುಂಬದ ಇಬ್ಬರು ಯುವ ಮಕ್ಕಳು ಕೆಲವೇ ತಿಂಗಳ ಅಂತರದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *