Breaking
11 Aug 2026, Tue

ಹಿಂದೆ ಆಟಿ ಆಚರಣೆಯಲ್ಲ, ಪ್ರಕೃತಿ ಸಹಜ ಬದುಕು-ಗೋಪಾಲ ಅಂಚನ್: ಕಲಾಬಾಗಿಲು ಬುರೂಜ್ ಶಾಲೆಯಲ್ಲಿ ‘ಆಟಿದ ಲೇಸ್’ ಕಾರ್ಯಕ್ರಮ

ಬಂಟ್ವಾಳ: ಹಿಂದಿನ ಕಾಲದಲ್ಲಿ ಆಟಿ ನಮ್ಮ ಹಿರಿಯರಿಗೆ ಆಚರಣೆಯಾಗಿರಲಿಲ್ಲ. ಅದು ಪ್ರಕೃತಿ ಸಹಜ ಬದುಕಿನ ಒಂದು ಭಾಗವಾಗಿತ್ತು ಎಂದು ಹಿರಿಯ ಪತ್ರಕರ್ತ ಹಾಗೂ ತುಳು ಜಾನಪದ ಅಧ್ಯಯನಕಾರ ಗೋಪಾಲ ಅಂಚನ್ ಹೇಳಿದರು.


ಕಲಾಬಾಗಿಲು ರಝಾನಗರ ಬುರೂಜ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆದ ‘ಆಟಿದ ಲೇಸ್’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಾರ್ಷಿಕ ಆವರ್ತನದಲ್ಲಿ ಅತ್ಯಂತ ಕಷ್ಟಕರವಾದ ತಿಂಗಳಾದ ಆಷಾಢದಲ್ಲಿ ಕಾಡುತ್ತಿದ್ದ ಹಸಿವು, ಅನಾರೋಗ್ಯ ಹಾಗೂ ಭಯವನ್ನು ನಿವಾರಿಸಲು ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆ ಪರಂಪರೆಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಇಂದು ಆಟಿ ಆಚರಿಸಲಾಗುತ್ತಿದೆಯೇ ಹೊರತು, ಇದು ಕೇವಲ ಸಂಭ್ರಮದ ಆಚರಣೆಯಲ್ಲ. ಮತ್ತೆ ಪ್ರಕೃತಿಯೊಂದಿಗೆ ಮುಖಾಮುಖಿಯಾಗಿ ಬದುಕಬೇಕೆನ್ನುವುದೇ ಆಟಿ ಆಚರಣೆಯ ಉದ್ದೇಶವಾಗಿದೆ ಎಂದರು.


ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್ ಅವರು ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಹಿಂದಿನ ಕಾಲದ ಆಟಿ ಹಾಗೂ ಪ್ರಸ್ತುತ ಆಚರಿಸಲಾಗುತ್ತಿರುವ ಆಟಿಯ ನಡುವಿನ ವೈರುಧ್ಯಗಳ ಕುರಿತು ವಿವರಿಸಿದರು.


ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಜೈನ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ವಲೇರಿಯನ್ ಲಸ್ರಾದೊ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ, ಶಬಾನಾ ಶೇಖ್, ಪುಂಜಾಲಕಟ್ಟೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹರೀಶ್ ನಾಯ್ಕ್ ಹಾಗೂ ಅಧಿಕಾರಿ ಕರೀಂ ಸಾಬ್ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ಹಾಗೂ ಪೋಷಕರು ತಂದ ವಿವಿಧ ಬಗೆಯ ಆಟಿ ತಿಂಗಳ ವಿಶೇಷ ಆಹಾರಗಳ ಪ್ರದರ್ಶನ ಹಾಗೂ ಉಪಾಹಾರ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಹಿಂದಿನ ಕಾಲದ ವಸ್ತುಗಳ ಪ್ರದರ್ಶನವೂ ವಿಶೇಷ ಗಮನ ಸೆಳೆಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.
ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಸ್ವಾಗತಿಸಿದರು. ಮಮತಾ ಆರ್. ವಂದಿಸಿದರು. ದಿವ್ಯಾ ಹಾಗೂ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *