ಮಂಗಳೂರು: ಚಲಿಸುತ್ತಿದ್ದ ರೈಲನ್ನು ಹತ್ತುವ ವೇಳೆ ಹಳಿಗೆ ಬಿದ್ದ ವೃದ್ಧ ಪ್ರಯಾಣಿಕರೊಬ್ಬರನ್ನು ರೈಲ್ವೆ ಪಾಯಿಂಟ್ಸ್‌ಮ್ಯಾನ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಸೋಮವಾರ(ಆ.10) ನಡೆದಿದೆ.

ಮುಂಬೈನಿಂದ ಮಂಗಳೂರಿನತ್ತ ಬರುತ್ತಿದ್ದ ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ವೃದ್ಧ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ನಿಲ್ದಾಣದ ಅಂಗಡಿಯೊಂದಕ್ಕೆ ತೆರಳಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು.

ಅಂಗಡಿಯಲ್ಲಿ ಖರೀದಿಸಿದ್ದ ವಸ್ತುವೊಂದನ್ನು ಅಲ್ಲಿಯೇ ಬಿಟ್ಟು ಬಂದಿದ್ದ ವೃದ್ಧರು ಅದನ್ನು ತರಲು ಅವಸರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಹಳಿಗೆ ಬಿದ್ದಿದ್ದು, ರೈಲಿನ ಚಕ್ರಗಳಡಿ ಸಿಲುಕುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಕರ್ತವ್ಯದಲ್ಲಿದ್ದ ರೈಲ್ವೆ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ಘಟನೆ ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ, ಹಳಿಗೆ ಬಿದ್ದಿದ್ದ ವೃದ್ಧರನ್ನು ರೈಲಿನಿಂದ ದೂರಕ್ಕೆ ಎಳೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಸಂಭವನೀಯ ಭೀಕರ ಅನಾಹುತ ತಪ್ಪಿದ್ದು, ಅವರ ಸಾಹಸಕ್ಕೆ ರೈಲ್ವೆ ಇಲಾಖೆ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


