Breaking
25 Sep 2026, Fri

ಕಡೆಕಾರು ಬಳಿ ಕಾರಿನಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಇಬ್ಬರು ಬಂಧನ

ಮಂಗಳೂರು: ಕಡೆಕಾರು ನೇತ್ರಾವತಿ ನದಿ ಸೇತುವೆಯ ಕೆಳಭಾಗದಲ್ಲಿ ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಜಪ್ಪಿನಮೊಗರು ನಿವಾಸಿ ಅಬ್ದುಲ್ ಹಕೀಂ (30) ಹಾಗೂ ಕೇರಳದ ಪಯ್ಯನ್ನೂರು ಮೂಲದ, ಮಂಜನಾಡಿ ನಾಟೆಕಲ್ನಲ್ಲಿ ವಾಸವಾಗಿರುವ ರಿಯಾಜ್ ಎ.ಕೆ. (32) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಟ್ಟು 16.71 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹1,67,100 ಎಂದು ಪೊಲೀಸರು ತಿಳಿಸಿದ್ದಾರೆ.


ಪಿಎಸ್ಐ ವಿನಾಯಕ ಬಾವಿಕಟ್ಟಿ ಅವರು ಸಿಬ್ಬಂದಿಯೊಂದಿಗೆ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಮಹಾಕಾಳಿ ಪಡ್ಪು ಕಡೆಯಿಂದ ಕಡೆಕಾರಿನತ್ತ ತೆರಳುತ್ತಿದ್ದರು. ಈ ಸಂದರ್ಭ ನೇತ್ರಾವತಿ ಸೇತುವೆಯ ಕೆಳಭಾಗದಲ್ಲಿ ಪೊಲೀಸರನ್ನು ಕಂಡ ಇಬ್ಬರು ಆರೋಪಿಗಳು ಓಡಲು ಯತ್ನಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.


ಅಬ್ದುಲ್ ಹಕೀಂನಿಂದ 8.63 ಗ್ರಾಂ ಎಂಡಿಎಂಎ, 13 ಜಿಪ್ಲಾಕ್ ಕವರ್ಗಳು, ಪರ್ಸ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ರಿಯಾಜ್ ಎ.ಕೆ.ಯಿಂದ 8.08 ಗ್ರಾಂ ಎಂಡಿಎಂಎ, 7 ಜಿಪ್ಲಾಕ್ ಕವರ್ಗಳು, ಪರ್ಸ್ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಮಾದಕ ವಸ್ತು ಸಾಗಾಟ ಮತ್ತು ಮಾರಾಟಕ್ಕೆ ಬಳಸಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ವಿಚಾರಣೆ ವೇಳೆ ಆರೋಪಿಗಳು ಮಂಜೇಶ್ವರದ ನೌಶಾದ್ ಎಂಬಾತನಿಂದ ವಾಣಿಜ್ಯ ಪ್ರಮಾಣದಲ್ಲಿ ಎಂಡಿಎಂಎ ಖರೀದಿಸಿ, ಕಡೆಕಾರಿಗೆ ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *