Breaking
22 Sep 2026, Tue

ನಕಲಿ ಇಡಿ ತಂಡ ದರೋಡೆಗೈದ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ : ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆಗೆ ಸಮಾಲೋಚನೆ

ವಿಟ್ಲ: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ದರೋಡೆ ನಡೆಸಿ ಪರಾರಿಯಾದ ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಂಡದೊಂದಿಗೆ ಬುಧವಾರ ಬೆಳಗ್ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಕಾರ್ಯವಿಧಾನದ ಕುರಿತು ಮನೆಯವರ ಜೊತೆಗೆ ಗೌಪ್ಯ ಸಮಾಲೋಚನೆ ನಡೆಸಿದರು.

ಬಳಿಕ ಮಾತನಾಡಿದ ಯು.ಟಿ.ಖಾದರ್ ತನಿಖೆ ಇನ್ನಷ್ಟು ತೀವ್ರಗೊಳಿಸಲು ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ಕ್ರಮ ಜರುಗಿಸಲಿದೆ. ಇದಕ್ಕೆ ಊರವರ ಮತ್ತು ಮನೆಯವರ ಸಹಕಾರ ಅಗತ್ಯ. ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ದರೋಡೆಕೋರರ ಪತ್ತೆ ಹಚ್ಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ವಿಜಯ ಪ್ರಸಾದ್ ಜೊತೆಗೆ ದರೋಡೆಗೊಳಗಾದ ಮನೆಯ ಮಾಲಕ ಸುಲೈಮಾನ್ ಹಾಜಿ ಹಾಗೂ ಪುತ್ರ ಇಕ್ಬಾಲ್ ಜೊತೆಗೆ ಗೌಪ್ಯ ಸಭೆ ನಡೆಸಿದರು.

ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಇ. ನಾಗರಾಜ್, ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *