ಕಾಸರಗೋಡು: ಜಾಗೃತಿ ಟ್ರಸ್ಟ್ ಬೆಂಗಳೂರು, ಶ್ರೀಮದ್ ಎಡನೀರು ಮಠ ಹಾಗೂ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಹಯೋಗದಲ್ಲಿ ಕರ್ನಾಟಕ–ಕೇರಳ ಸಾಂಸ್ಕೃತಿಕ ವೈಭವ ಹಾಗೂ ಅಭಿನಂದನಾ ಸಮಾರಂಭವು ಜುಲೈ 25ರಂದು ಎಡನೀರು ಮಠದ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಬೆಂಗಳೂರು ಕಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರಾದ ಸರಕಾರಿ ಪ್ರೌಢ ಶಾಲೆ ಕಬಕದ ಶಿಕ್ಷಕಿ ಡಾ. ಶಾಂತಾ ಪುತ್ತೂರು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜಾಗೃತಿ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಬಿ. ನಾಗೇಶ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ.ಆರ್. ಸುಬ್ಬಯ್ಯ ಕಟ್ಟೆ, ಶ್ರೀಮದ್ ಎಡನೀರು ಮಠದ ವ್ಯವಸ್ಥಾಪಕರಾದ ರಾಜೇಂದ್ರ ಕಲ್ಲೂರಾಯ, ಮಹೇಶ್ ವಳಕುಂಜ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಪ್ರಭಾಕರ ಎಸ್. ಹಾಗೂ ಲಕ್ಷ್ಮೀನಾಯ್ಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಜಾಗೃತಿ ಟ್ರಸ್ಟ್ ವತಿಯಿಂದ ಗೌರವಿಸಿ ಆಶೀರ್ವಾದ ಪಡೆಯಲಾಯಿತು. ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ. ನಾಗೇಶ್ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕಿ ಡಾ. ಶಾಂತಾ ಪುತ್ತೂರು, ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ನಿವೃತ್ತ ಶಿಕ್ಷಕ ಸೂರ್ಯನಾರಾಯಣ ಭಟ್, ವೆಂಕಟ ಭಟ್ ಎಡನೀರು, ಉದ್ಯಮಿ ಸತೀಶ್ ರಾವ್ ಮೊದಲಾದ ಸಾಧಕರನ್ನು ಹಾಗೂ ಉದಯೋನ್ಮುಖ ಕಲಾವಿದರನ್ನು ಗೌರವಿಸಲಾಯಿತು.
ಡಾ.ಕೆ.ಎನ್.ವೆಂಕಟರಮಣ ಹೊಳ್ಳರಿಗೆ ಗಡಿನಾಡ ಶ್ರೇಷ್ಠ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಂತರ ನಡೆದ ಕರ್ನಾಟಕ ಕೇರಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರಿಂದ ನಯನ ಮನೋಹರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಲಾವಿದರಿಗೆ ಜಾಗೃತಿ ಟ್ರಸ್ಟ್ ವತಿಯಿಂದ ಸ್ಮರಣಿಕೆ ಅಭಿನಂದನಾ ಪತ್ರ ನೀಡಲಾಯಿತು.ಯೋಗ ಗುರು ನಂದಾದೀಪ ಕಾರ್ಯಕ್ರಮ ನಿರೂಪಿಸಿದರು.


