ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ನಗರದ 16 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 59 ಎನ್ಡಿಪಿಎಸ್ (NDPS) ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಸುಮಾರು ₹82 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಬುಧವಾರ ನಿಯಮಾನುಸಾರ ನಾಶಪಡಿಸಲಾಯಿತು.

ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ 450 ಕೆ.ಜಿ. ಗಾಂಜಾ, 43 ಕೆ.ಜಿ. 260 ಗ್ರಾಂ ಎಂ.ಡಿ.ಎಂ.ಎ., 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1 ಕೆ.ಜಿ. 200 ಗ್ರಾಂ ಭಾಂಗ್ ಸೇರಿವೆ.

ಇವುಗಳಲ್ಲಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸುಮಾರು ₹75 ಕೋಟಿ ಮೌಲ್ಯದ 37 ಕೆ.ಜಿ. ಎಂ.ಡಿ.ಎಂ.ಎ., 2025ರಲ್ಲಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಸುಮಾರು ₹4.47 ಕೋಟಿ ಮೌಲ್ಯದ 4 ಕೆ.ಜಿ. ಎಂ.ಡಿ.ಎಂ.ಎ., ಕೊಣಾಜೆ ಪೊಲೀಸ್ ಠಾಣೆಯ ₹20 ಲಕ್ಷ ಮೌಲ್ಯದ 106 ಕೆ.ಜಿ. ಗಾಂಜಾ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆಯ ₹36 ಲಕ್ಷ ಮೌಲ್ಯದ 111 ಕೆ.ಜಿ. ಗಾಂಜಾ ಪ್ರಮುಖವಾಗಿವೆ.

ಇದೇ ವೇಳೆ, 2026ರ ಜನವರಿಯಿಂದ ಇದುವರೆಗೆ ನಗರ ಪೊಲೀಸ್ ವ್ಯಾಪ್ತಿಯಲ್ಲಿ 87 ಎನ್ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 157 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ₹8,18,30,130 ಮೌಲ್ಯದ 148 ಕೆ.ಜಿ. 615 ಗ್ರಾಂ ಗಾಂಜಾ, 7 ಕೆ.ಜಿ. 165 ಗ್ರಾಂ ಎಂ.ಡಿ.ಎಂ.ಎ., 1 ಕೆ.ಜಿ. 705 ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೆ, ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


