ಬಂಟ್ವಾಳ: ಯಕ್ಷಗಾನ ಕಲೆಯಿಂದ ಸಿದ್ದಕಟ್ಟೆಯ ಹೆಸರನ್ನು ನಾಡಿನ ಉದ್ದ ಅಗಲಕ್ಕೂ ಪಸರಿಸಿದ ಯಕ್ಷಗಾನ ದಿಗ್ಗಜರ ನಾಡು ಸಿದ್ದಕಟ್ಟೆ ಪರಿಸರದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಟ್ಲ ಪೌಂಡೇಷನ್ ಮಂಗಳೂರು ಮಾರ್ಗದರ್ಶನದ ಯಕ್ಷ ಧ್ರುವ ಯಕ್ಷ ಶಿಕ್ಷಣ ವತಿಯಿಂದ ನೀಡುವ ಯಕ್ಷಗಾನ ತರಬೇತಿ ಅತ್ಯಂತ ಅವಶ್ಯಕವಾಗಿದೆ ಎಂದೂ ಯಕ್ಷಧ್ರುವ ಯಕ್ಷಶಿಕ್ಷಣ ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ದೇವದಾಸ ಶೆಟ್ಟಿ ಬಂಟ್ವಾಳ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ವತಿಯಿಂದ ನೀಡುತ್ತಿರುವ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಮಾತನಾಡಿ ಯಕ್ಷಗಾನ ತರಬೇತಿ ಪಡೆಯುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟವೂ ಸಹ ಹೆಚ್ಚುತ್ತಾ ಹೋಗುತ್ತದೆ ಎಂದೂ ಸಂಶೋಧನೆಯಿಂದ ತಿಳಿದುಬಂದಿದೆ.

ಈ ನಿಟ್ಟಿನಲ್ಲಿ ಈ ಭಾಗದ ವಿದ್ಯಾರ್ಥಿಗಳ ಪೋಷಕರು ಯಕ್ಷಗಾನ ತರಬೇತಿಗೆ ಪ್ರೋತ್ಸಾಹ ನೀಡಬೇಕು ಎಂದರು. ಯಕ್ಷಧ್ರುವ ಯಕ್ಷ ಶಿಕ್ಷಣ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕು ಸಂಚಾಲಕಿ ಸಾಯಿ ಸುಮಾ ನಾವುಡ ತರಬೇತಿಯ ನಿಯಮಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಉಮೇಶ್ ಗೌಡ ಮಾತನಾಡಿ ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುವ ಪಟ್ಲ ಪೌಂಡೇಷನ್ ಯಕ್ಷಧ್ರುವ ಯಕ್ಷ ಶಿಕ್ಷಣ ಸಮಿತಿಯ ಪದಾಧಿಕಾರಿಗಳಿಗೆ ಧನ್ಯವಾದ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ಪ್ರಭಾಕರ ಪ್ರಭು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು,ರಾಮಕೃಷ್ಣ ನಾಯಕ್,ಮಾಧವ ಶೆಟ್ಟಿಗಾರ್,ಚಂದ್ರಶೇಖರ ಕರ್ಪೆ, ನೋಣಯ ಮೂಲ್ಯ, ಹರೀಶ್ ಶೆಟ್ಟಿ ಸಿದ್ದಕಟ್ಟೆ, ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಉಪ ಪ್ರಾಂಶುಪಾಲೆ ಲೋನಾ ಲೋಬೊ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಕುಮಾರ್ ವಿ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.


